ವರದಿ: ರಹೀಂ ಉಜಿರೆ
ಉಡುಪಿ: ಸಂಘ- ಸಂಸ್ಥೆಗಳು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ. ಆದರೆ, ಉಡುಪಿಯ ಯಕ್ಷಗಾನ ಕಲಾರಂಗದ ಸಾಮಾಜಿಕ ಸೇವೆ ಅಪೂರ್ವವಾದುದು. ಯಕ್ಷಗಾನ ಕಲಾವಿದರ ಸೇವೆಯ ಜೊತೆಜೊತೆಗೇ ಈ ಸಂಸ್ಥೆ ಬಡ
ಮಕ್ಕಳಿಗಾಗಿ 'ವಿದ್ಯಾಪೋಷಕ್' ಎಂಬ ಯೋಜನೆ ಹಮ್ಮಿಕೊಂಡಿದೆ.
ಏನಿದು ವಿದ್ಯಾಪೋಷಕ್ ?: ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಯೋಜನೆ ವಿದ್ಯಾಪೋಷಕ್ ಹೊಸಕ್ರಾಂತಿಯನ್ನೇ ಉಂಟುಮಾಡಿದೆ. ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಸಾರ್ಥಕ ಕೆಲಸ ಕೈಗೊಂಡಿದೆ. ಈವರೆಗೆ 30 ಬಡ ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿ ಕೊಟ್ಟಿರುವ ಯಕ್ಷಗಾನ ಕಲಾರಂಗ, ಸಂಸ್ಥೆಯ 31ನೇ ಮನೆ ಹಸ್ತಾಂತರ ಇತ್ತೀಚೆಗೆ ನಡೆಯಿತು.
ಬಡ, ಅರ್ಹ ವಿದ್ಯಾರ್ಥಿಗಳ ಮನೆಗಳಿಗೆ ಸ್ವತಃ ಭೇಟಿ ಕೊಡುವ ಸಂಸ್ಥೆಯ ಸ್ವಯಂ ಸೇವಕರು, ಅಲ್ಲಿನ ಸ್ಥಿತಿಗತಿ, ವಿದ್ಯಾರ್ಥಿಯ ಬೇಡಿಕೆ, ನಿಜಕ್ಕೂ ಆ ವಿದ್ಯಾರ್ಥಿ ಅರ್ಹ ಫಲಾನುಭವಿಯೇ ಎಂಬುದನ್ನು ಮನದಟ್ಟು ಮಾಡಿಕೊಂಡು, ಅವರಿಗೆ ಮನೆ ಕಟ್ಟಿ ಕೊಡುತ್ತದೆ. ಮನೆ ಅಂದರೆ ಪೂರ್ಣ ಪ್ರಮಾಣದ ಮನೆ!
ಈ ರೀತಿ ದಾನಿಗಳ ನೆರವಿನಿಂದ ಈವರೆಗೆ 30 ಮನೆಗಳನ್ನು ಹಸ್ತಾಂತರಿಸಲಾಗಿದೆ. ಯಕ್ಷಗಾನ ಕಲಾರಂಗ ಸಂಸ್ಥೆಯ ವಿಶ್ವಾಸಾರ್ಹ ಕಾರ್ಯಶೈಲಿಯನ್ನು ಮೆಚ್ಚಿ ಅನೇಕ ದಾನಿಗಳು ಬಡಮಕ್ಕಳ ನೆರವಿಗೆ ಮುಂದಾಗುತ್ತಿದ್ದಾರೆ.
ಯಕ್ಷಗಾನ ಕಲಾರಂಗ ನಿರ್ಮಿಸಿದ 31ನೇ ಮನೆಯ ಉದ್ಘಾಟನೆ ಸಮಾರಂಭ ಹಿರಿಯಡ್ಕ ಸಮೀಪದ ಕೊಂಡಾಡಿಯಲ್ಲಿ ಜರುಗಿತು. ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯರಾದ ರಕ್ಷಿತಾ ಪೂಜಾರಿ ಹಾಗೂ ಧನ್ಯ ಪೂಜಾರಿ ಇವರಿಗೆ ಪೇಜಾವರ ಮಠ ಮತ್ತು ಗುರುರಾಜ ಅಮೀನ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಮನೆ ‘ಶ್ರೀಗುರು ಕೃಪಾ’ವನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಿಜಕ್ಕೂ ಒಂದು ಸಂಸ್ಥೆಯ ಸಾರ್ಥಕತೆ ಇರುವುದು ಇಂತಹ ಸಾಮಾಜಿಕ ಕೆಲಸಗಳಿಂದ ಅಲ್ಲವೇ?
PublicNext
22/06/2022 09:11 pm