ಪಬ್ಲಿಕ್ ನೆಕ್ಸ್ಟ್ ಕ್ರೈಂ ಫಾಲೊ ಅಪ್
ವರದಿ: ರಹೀಂ ಉಜಿರೆ
ಬ್ರಹ್ಮಾವರ: ಕಾರಿನೊಳಗೆ ಕೂತು ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವ ಜೋಡಿಯ ಅಂತ್ಯಸಂಸ್ಕಾರ ಉಡುಪಿಯಲ್ಲೇ ನಡೆಯಿತು. ಒಟ್ಟಿಗೆ ಬದುಕಲು ಸಾಧ್ಯವಾಗದಿದ್ದರೂ ಈ ಯುವ ಜೋಡಿಯನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಯಿತು.
ನಿನ್ನೆ ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಗುರುತು ಪತ್ತೆಯಾಗದ ರೀತಿಯಲ್ಲಿ ಯಶವಂತ ಯಾದವ್ ಮತ್ತು ಜ್ಯೋತಿಯ ಶವ ಸಿಕ್ಕಿತ್ತು. ಶವದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿಯೇ ನಡೆಸಲಾಯಿತು. ನಡುರಾತ್ರಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಎರಡು ಕುಟುಂಬದವರು ಸೇರಿ ಶವಗಳ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಿದರು.
ಅಲ್ಲಿ ಸಂಸ್ಕಾರ ಮಾಡುವುದಕ್ಕೆ ಏನೂ ಉಳಿದಿರಲಿಲ್ಲ. ಘಟನಾ ಸ್ಥಳದಲ್ಲೇ ಶವ ಸಂಪೂರ್ಣ ಸುಟ್ಟು ಹೋಗಿತ್ತು. ಆದರೆ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ನಡೆಸಲೇಬೇಕು. ಹಾಗಾಗಿ ಸುಟ್ಟು ಕರಕಲಾದ ಶವವನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಬದಲಾಗಿ ಉಡುಪಿಯಲ್ಲೇ ಸಂಸ್ಕಾರ ಮಾಡಲು ಎರಡು ಕುಟುಂಬದವರು ತೀರ್ಮಾನ ನಡೆಸಿದ್ದರು.
ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಮಣಿಪಾಲದಿಂದ ಸ್ವಲ್ಪವೇ ದೂರದಲ್ಲಿರುವ ಇಂದ್ರಾಳಿ ಸ್ಮಶಾನದಲ್ಲಿ, ಅಂತಿಮ ಸಂಸ್ಕಾರ ನಡೆಸಲಾಯಿತು.ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯವರು ವಿರೋಧಿಸಿದರೆಂದು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿತ್ತು. ಕೊನೆಯದಾಗಿ ಕಳಿಸಿದ್ದ ವಾಟ್ಸಪ್ ಮೆಸೇಜ್‌ನಲ್ಲಿ ಇದೆ ವಿಚಾರ ಬರೆಯಲಾಗಿತ್ತು. ಮನೆಯವರನ್ನು ಬಿಟ್ಟಿರೋದು ಸಾಧ್ಯವಿಲ್ಲ. ನಾವಿಬ್ಬರೂ ಬೇರೆ ಆಗುವುದಿಲ್ಲ. ಹಾಗಾಗಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇವೆ. ಕ್ಷಮಿಸಿ ಎಂದು ಬರೆಯಲಾಗಿತ್ತು. ಆದರೆ ಈ ಯುವ ಜೋಡಿಗಳ ಎರಡು ಕುಟುಂಬದವರು ಹೇಳುವುದೇ ಬೇರೆ.ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ ಎಂದು ಜ್ಯೋತಿಯ ಮನೆಯವರು ಹೇಳುತ್ತಾರೆ.
ಒಟ್ಟಾರೆ ದುಡುಕಿನ ನಿರ್ಧಾರದಿಂದಾಗಿ ಯುವ ಪ್ರೇಮಿಗಳು ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ.ಸಾವಿನಲ್ಲೂ ಒಂದಾಗಿದ್ದಾರೆ.
PublicNext
23/05/2022 05:49 pm