ವರದಿ: ರಹೀಂ ಉಜಿರೆ
ಸಾಸ್ತಾನ: 30 ವರ್ಷಗಳ ವರೆಗೆ ಹೋಟೆಲ್ ಉದ್ಯಮಿಯಾಗಿದ್ದ ಇವರು, ನಂತರ ಹೋಟೆಲ್ ಕಾರ್ಮಿಕನಾಗಿಯೂ ದುಡಿಯುವಂತಾಯ್ತು! ಈಗ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಮಕ್ಕಳಿಂದ ತಿರಸ್ಕರಿಸಲ್ಪಟ್ಟ ಹಿರಿಯ ಜೀವ, ಈಗ ತನ್ನ ಬದುಕಿನ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ.
ಸುಕ್ಕುಗಟ್ಟಿದ ಮುಖ, ದುಃಖತಪ್ತ ಕಣ್ಣು, ವೃದ್ಧಾಪ್ಯದಂಚಿನ ಇಂಚಿಂಚು ನೋವು ಉಣ್ಣುತ್ತಿರುವ ಚೇತನವಿದು. ಉಡುಪಿಯ ಸಾಸ್ತಾನ ನಿವಾಸಿ ಶ್ರೀನಿವಾಸ ತುಂಗ ಅವರು ಮಂಡ್ಯ ಜಿಲ್ಲೆಯಲ್ಲಿ ಮೂರು ದಶಕ ಕಾಲ ಹೋಟೆಲ್ ನಡೆಸುತ್ತಿದ್ದರು. ತಾನೂ ದುಡಿದು ನೌಕರರಿಗೆ ಸಂಬಳ ನೀಡುತ್ತಿದ್ದರು. ವೃದ್ಧಾಪ್ಯದಲ್ಲಿ ತನ್ನ ಸಹೋದರಿ ಪುತ್ರನಿಗೆ ಹೋಟೆಲ್ ವಹಿಸಿಕೊಟ್ಟಿದ್ದೇ ತಪ್ಪಾಯ್ತು!
ಪರಿಣಾಮ, ಮಡದಿ- ಮಕ್ಕಳು ಇವರನ್ನು ದೂರ ಮಾಡಿದರು. 20 ವರ್ಷಗಳ ಹಿಂದೆ ಪುತ್ರನೇ ಮನೆಯಿಂದ ಹೊರಹಾಕಿದ! ಬಳಿಕ ಬೆಂಗಳೂರಿನ ಹೋಟೆಲ್ ನಲ್ಲಿ ಕಾರ್ಮಿಕನಾಗಿ ದುಡಿದ ಶ್ರೀನಿವಾಸ್, ಈಗ ತವರು ಜಿಲ್ಲೆಗೇ ಮರಳಿದ್ದಾರೆ. ಹಾಗಂತ ಇವರ ಮಕ್ಕಳಿಗೇನೂ ಹಣದ ಕೊರತೆಯಿಲ್ಲ. ಹಿರಿಯ ಮಗ ಉದ್ಯಮಿ. 2ನೇ ಮಗ ಮತ್ತು ಮಗಳು ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ.
ಮನೆಯಿಂದ ಮಗ ಹೊರಹಾಕಿದ್ದಕ್ಕೆ ನೊಂದುಕೊಂಡರೂ ಸ್ವಾಭಿಮಾನದಿಂದ ಬದುಕು ನಡೆಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಹಿರಿಯ ನಾಗರಿಕರ ಸಹಾಯವಾಣಿ ಹಾಗೂ ನ್ಯಾಯ ಮಂಡಳಿಗೆ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಆದರೆ, 29 ತಿಂಗಳಲ್ಲಿ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿಲ್ಲ. ಬಾಡಿಗೆ ಮನೆವಾಸಿ ಶ್ರೀನಿವಾಸ್, ಒಪ್ಪತ್ತಿನ ಊಟಕ್ಕೆ ದೇವಸ್ಥಾನ, ಜಾತ್ರೆಯನ್ನೇ ಅವಲಂಬಿಸಿದ್ದಾರೆ ಎಂದರೆ ನೀವು ನಂಬಲೇಬೇಕು!
ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಬೆಂಬಲ ಕೋರಿ ಬಂದಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾಗಿರುವ ಪ್ರತಿಷ್ಠಾನ, ಹಿರಿಯ ನಾಗರಿಕರ ಪರವಾಗಿ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಜ್ಜಾಗಿದೆ.
Kshetra Samachara
10/03/2022 10:24 pm