ಬಂಟ್ವಾಳ: ಮಂಗಳೂರು ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ವಿಶ್ವ ಕೊಂಕಣಿ ಸರ್ದಾರ್ (ನಾಯಕ) ಎಂದೇ ಗುರುತಿಸಲ್ಪಟ್ಟಿದ್ದ ಬಂಟ್ವಾಳದ ಬಸ್ತಿ ವಾಮನ ಶೆಣೈ (88) ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನರಾದರು. ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಜ. 3ರಂದು ಪಾರ್ಥಿವ ಶರೀರವನ್ನು ಬೆಳಗ್ಗೆ 9ರಿಂದ 10ರ ವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕೊಂಕಣಿ ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಹಾಗೂ ಕೊಂಕಣಿ ಭಾಷಿಕರನ್ನು ವಿಶ್ವಾದ್ಯಂತ ಒಗ್ಗೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ರಾಜ್ಯಾದ್ಯಂತ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೊಂಕಣಿ ಸಾಂಸ್ಕೃತಿಕ, ಭಾಷಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕಾಂಗ್ರೆಸ್, ಇಂಟಕ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಗುರುತಿಸಿಕೊಂಡಿದ್ದ ಅವರು, ಬಂಟ್ವಾಳದ ಎಸ್.ವಿ.ಎಸ್. ಸಂಸ್ಥೆಗಳ ಸಂಚಾಲಕರಾಗಿ, ಬಂಟ್ವಾಳದ 'ಯಶವಂತ' ವ್ಯಾಯಾಮ ಶಾಲೆ ಅಧ್ಯಕ್ಷರಾಗಿ, ರೋಟೇರಿಯನ್ ಆಗಿ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ.
Kshetra Samachara
02/01/2022 03:19 pm