ಮುಲ್ಕಿ: ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಸಾವು ಕಂಡ ಸಿಡಿಎಸ್ ಜ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಇತರ ವೀರ ಯೋಧರಿಗೆ ಮುಲ್ಕಿ ಗೆಳೆಯರ ಬಳಗ ಹಾಗೂ ಮುಲ್ಕಿ ಆಟೋ ಚಾಲಕ- ಮಾಲೀಕರ ಸಂಘ, ವರ್ತಕರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಹೊಸಪೇಟೆಯಲ್ಲಿ ಜರುಗಿತು.
ಈ ಸಂದರ್ಭ ಮುಲ್ಕಿ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ ಮಾತನಾಡಿ, ರಾಷ್ಟ್ರದ ಭದ್ರತೆಗಾಗಿ ಜೀವವನ್ನು ಪಣಕ್ಕಿಟ್ಟು ಹಗಲಿರುಳೂ ಹೋರಾಡಿದ ವೀರ ಸೈನಿಕರ ಬಲಿದಾನ ಸದಾ ಸ್ಮರಣೀಯ. ಈ ಮಹನೀಯರಿಗೆ ಗೌರವಯುತ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ದೇಶ ಇನ್ನೂ ಬಲಿಷ್ಠವಾಗಲು ಒಗ್ಗಟ್ಟಿನಿಂದ ಕಾರ್ಯೋನ್ಮುಖರಾಗೋಣ ಎಂದರು.
ಮುಲ್ಕಿ ನಪಂ ಮಾಜಿ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ನಮ್ಮ ಮೂರೂ ಸೇನೆಗಳ ಮುಖ್ಯಸ್ಥರಾದ ಸಿಡಿಎಸ್ ಜ.ಬಿಪಿನ್ ರಾವತ್ ಭಾರತೀಯ ಸೇನೆಯನ್ನು ಉತ್ತುಂಗಕ್ಕೇರಿಸಿದ ಮಹಾನ್ ವ್ಯಕ್ತಿ . ಅವರ ಬಲಿದಾನ ದೇಶಕ್ಕೆ ತುಂಬಲಾರದ ನಷ್ಟ ಎಂದರು.
ಬಳಿಕ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಹಾಗೂ ಮೊಂಬತ್ತಿಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಿವೃತ್ತ ಯೋಧ ನಾರಾಯಣ ರೈ, ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ, ಉದ್ಯಮಿ ಕಮಲಾಕ್ಷ ಬಡಗಿತ್ಲು, ಮಯೂರಿ ಫೌಂಡೇಶನ್ ನ ಜಯ ಶೆಟ್ಟಿ, ಆಟೋ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಶಶಿಕಾಂತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/12/2021 10:50 pm