ಬಜಪೆ : ಗುರುಪುರ ಸಮೀಪದ ಪರಾರಿಯಲ್ಲಿ ಅತ್ಯಾಚಾರ ನಡೆಸಿ ಕೊಲೆಗೈಯಲಾದ 8 ವರ್ಷದ ಮಗುವಿನ ಆತ್ಮಕ್ಕೆ ಚಿರಶಾಂತಿ ಕೋರಿ ಗುರುಪುರ ಜಂಕ್ಷನ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮಾತೃಶಕ್ತಿ ದುರ್ಗಾವಾಹಿನಿ ಪ್ರಖಂಡ ಗುರುಪುರ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಈ ಊರಿನಲ್ಲಿ ನಡೆದ ಅತ್ಯಂತ ದುಃಖದ ಕೃತ್ಯ ಇದಾಗಿದೆ. ಬಂಧಿತರ ವಿರುದ್ಧ ಬಲವಾದ ಸಾಕ್ಷ್ಯಾಧಾರ ಸಂಗ್ರಹಿಸಿ, ವಿಳಂಬ ಮಾಡದೆ ಅಪರಾಧಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕು. ಈ ಮೂಲಕ ಬೇರೆಲ್ಲೂ ಇಂತಹ ಹೀನ ಮತ್ತು ನೀಚ ಕೃತ ಪುನರಾವರ್ತನೆಯಾಗಬಾರದು ಎಂದರು.
ಸಭೆಯ ಆರಂಭದಲ್ಲಿ ಮೃತ ಬಾಲಕಿ ಭಾವಚಿತ್ರದೆದುರು ಹಣತೆ ದೀಪ ಹಚ್ಚಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು. ಸಭೆಯಲ್ಲಿ ಹಿಂದೂ ಪ್ರತಿಷ್ಠಾನದ ಸದಸ್ಯ ಜಯರಾಮ ಕೊಟ್ಟಾರಿ, ಜಿಲ್ಲಾ ಸಹ ಕಾರ್ಯದರ್ಶಿ ವಸಂತ್ ಸುವರ್ಣ, ಜಿಲ್ಲಾ ಸಹ ಪ್ರಮುಖ ಸುಜಾತಾ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು,ಊರಿನ ಗಣ್ಯ ನಾಗರಿಕರು ಉಪಸ್ಥಿತರಿದ್ದರು.
Kshetra Samachara
26/11/2021 07:04 pm