ಮಟ್ಟು: ಇಲ್ಲೊಂದು ಬಡ ಕುಟುಂಬ ಐದು ದಶಕದಿಂದ ವಿದ್ಯುತ್ ಬೆಳಕನ್ನೇ ಕಂಡಿಲ್ಲ ಎಂದರೆ ನೀವು ನಂಬಲೇಬೇಕು! ಚಿಮಿಣಿ ದೀಪದಲ್ಲೇ ಈ ಕುಟುಂಬ ದಿನ ದೂಡುತ್ತಿದೆ.ಅಂದಹಾಗೆ ಈ ಮನೆ ಇರುವುದು ಬೇರೆಲ್ಲೂ ಅಲ್ಲ , ರಾಜ್ಯದ ಇಂಧನ ಸಚಿವರ ತವರು ಜಿಲ್ಲೆ ಉಡುಪಿಯಲ್ಲೇ!
ಈ ದೃಶ್ಯದಲ್ಲಿ ಕಾಣುತ್ತಿರುವ ಈ ಮನೆ ಇರುವುದು ಉಡುಪಿ ನಗರದಿಂದ ಕೇವಲ 15 ಕಿ.ಲೋ ಮೀಟರ್ ದೂರದ
ಕಟಪಾಡಿಯ ಮಟ್ಟು ಎಂಬಲ್ಲಿ. ಚಂದ್ರಶೇಖರ್ ಎನ್ನುವ ಪರಿಶಿಷ್ಟ ವರ್ಗಕ್ಕೆ ಸೇರಿದವರ ಈ ಮನೆಯಲ್ಲಿ ಇವರ ಅಣ್ಣ, ಸಹೋದರಿ ಮತ್ತು ಅಣ್ಣನ ಮಕ್ಕಳು ವಾಸವಾಗಿದ್ದಾರೆ. ಚಂದ್ರಶೇಖರ ಅವರಿಗೆ ಎಲ್ಲರ ಮನೆಯಂತೆ ತನ್ನ ಮನೆಯಲ್ಲೂ ವಿದ್ಯುತ್ ದೀಪ ಇರಬೇಕು ಎನ್ನುವ ಆಸೆ. ಇವರ ವಿದ್ಯುತ್ ದೀಪದ ಆಸೆ ಇಂದು ನಿನ್ನೆಯದಲ್ಲ: ಬರೋಬ್ಬರಿ 50 ವರ್ಷಗಳ ಕನಸು!
ವಿದ್ಯುತ್ ಸಂಪರ್ಕಕ್ಕೆ ಇವರು ಅರ್ಜಿ ಸಲ್ಲಿಸುವಾಗ ಜಾಗದ ವಿಷಯದಲ್ಲಿ ವ್ಯಕ್ತಿಯೊಬ್ಬರು ತಗಾದೆ ತೆಗೆದಿದ್ದಾರೆ. ಇದರಿಂದಾಗಿ ಚಂದ್ರಶೇಖರ್ ಅವರ ಮನಗೆ ವಿದ್ಯುತ್ ಸಂಪರ್ಕ ಇನ್ನೂ ಮರೀಚಿಕೆಯಾಗಿದೆ.
ಈ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಸಲು ಸ್ಥಳೀಯ ಕೋಟೆ ಗ್ರಾಮ ಪಂಚಾಯತ್ 2017ರಲ್ಲೇ ವಿದ್ಯುತ್ ಗಾಗಿ ನಿರಪೇಕ್ಷಣಾ ಅರ್ಜಿ ನೀಡದರೂ ಇವರಿಗೆ ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ನೀಡಿಲ್ಲ.ಮನೆ ಹತ್ತಿರವೇ ವಿದ್ಯುತ್ ಕಂಬ ಇದ್ದರೂ, ಈ ಮನೆಗೆ ವಿದ್ಯುತ್ ಇಲ್ಲದೇ ಮೊಬೈಲ್ ಚಾರ್ಜ್‌ಗಾಗಿಯೂ ಪಕ್ಕದ ಮನೆಯನ್ನು ಆಶ್ರಯಿಸಬೇಕಿದೆ.
ವಿದ್ಯುತ್ ದೀಪಕ್ಕಾಗಿ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಸಹಿತ ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡಿದರೂ, ಭರವಸೆ ಮಾತ್ರ ಸಿಕ್ಕಿದೆಯೇ ಹೊರತು ಬೆಳಕು ಬಂದಿಲ್ಲ.ಉಡುಪಿ ಜಿಲ್ಲೆಯವರೇ ಆದ ಇಂಧನ ಸಚಿವರು ಇನ್ನಾದರೂ ಚಂದ್ರ ಶೇಖರ್ ಅವರ ಬೆಳಕಿನ ಆಸೆ ಈಡೇರಿಸುತ್ತಾರೋ ಕಾದು ನೋಡಬೇಕಿದೆ.
Kshetra Samachara
02/09/2021 03:54 pm