ವರದಿ: ರಹೀಂ ಉಜಿರೆ
ಕುಂದಾಪುರ: ತನ್ನದಲ್ಲದ ತಪ್ಪಿಗಾಗಿ ಉಡುಪಿಯ ಹರೀಶ್ ಬಂಗೇರ ಸೌದಿಯಲ್ಲಿ ಸೆರೆವಾಸ ವಾಸ ಅನುಭವಿಸಿದ್ದರು. ಇತ್ತ ಗಂಡನಿಗಾಗಿ ಪತ್ನಿ ಪ್ರತಿನಿತ್ಯ ಕಣ್ಣೀರು ಸುರಿಸುತ್ತಿದ್ದಳು.. ಕೊನೆಗೂ ಸಾವಿರಾರು ಜನರ ಪ್ರಾರ್ಥನೆ ಫಲಿಸಿ, ಹರೀಶ್ ಬಿಡುಗಡೆಗೊಂಡಿದ್ದಾರೆ. ನಿರಪರಾಧಿ ಎಂದು ಸಾಬೀತಾಗಿ ಇವತ್ತು ಹುಟ್ಟೂರಿಗೆ ಬರ್ತಿದ್ದಾರೆ...
ಇಂದು ಬೆಂಗಳೂರಿನ ವಿಮಾನ ನಿಲ್ದಾಣ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ ಆಯ್ತು. ಸೌದಿ ಅರೇಬಿಯಾದ ಜೈಲಿನಲ್ಲಿ ಬರೋಬ್ಬರಿ ಇಪ್ಪತ್ತು ತಿಂಗಳು ಬಂಧಿಯಾಗಿದ್ದ ಉಡುಪಿಯ ಹರೀಶ್ ಬಂಗೇರಾ ಬೆಂಗಳೂರಿಗೆ ಬಂದು, ಪತ್ನಿ ಮಗಳ ಅಪ್ಪುಗೆಯಲ್ಲಿ ನೆಮ್ಮದಿಯ ಬಂಧಿಯಾದರು. ಬಿಡುಗಡೆಗೆ ಶ್ರಮಿಸಿದವರಲ್ಲಿ ಸಾರ್ಥಕತೆ ಇತ್ತು. ಎರಡು ವರ್ಷದ ಕರಾವಳಿಯ ಜನರ ಪ್ರಾರ್ಥನೆ ಫಲಿಸಿತ್ತು..
2019 ರಲ್ಲಿ NRC, CAA ಗಲಾಟೆ ದೇಶದೆಲ್ಲೆಡೆ ಜೋರಾಗಿತ್ತು. ಅದೇ ಸಂದರ್ಭದಲ್ಲಿ ಸೌದಿಯಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಹರೀಶ್ ಬಂಗೇರಾರನ್ನು ಟಾರ್ಗೆಟ್ ಮಾಡಿದ ಕಿಡಿಗೇಡಿಗಳು, ಹರೀಶ್ ಬಂಗೇರಾ ಹೆಸರರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಪೋಸ್ಟ್ ಮಾಡಿದ ನಂತರ ಸೌದಿ ಅರೇಬಿಯಾ ಪೊಲೀಸರು ಹರೀಶ್ ಬಂಗೇರಾರನ್ನು ಬಂಧಿಸಿ ಜೈಲಿಗಟ್ಟಿದ್ರು.ತಪ್ಪು ಮಾಡದೇ ಇದ್ದರೂ ಹರೀಶ್ ಜೈಲುವಾಸ ಅನುಭವಿಸುವಂತಾಯಿತು.
ಇತ್ತ ಹರೀಶ್ ಬಂಗೇರಾ ನಿರಪರಾಧಿ ಅಂತ ಪ್ರೂವ್ ಮಾಡೋದೇ ದೊಡ್ಡ ಸಾವಾಲಾಗಿತ್ತು. ಹರೀಶ ಬಂಗೇರಾ ಅವರ ಹೆಸರಲ್ಲಿ ನಕಲಿ ಖಾತೆ ತೆರೆದ ಬಗ್ಗೆ ಹರೀಶ್ ಬಂಗೇರಾ ಹಿತೈಷಿಗಳು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು, ತನಿಖೆ ನಡೆಸಿದ ಪೊಲೀಸರು ಮೂಡಬಿದಿರೆ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದರು, ನಂತರ ಇವೆಲ್ಲ ದಾಖಲೆ ಸಹಿತ ಸೌದಿ ಸರ್ಕಾರಕ್ಕೆ ಒಪ್ಪಿಸಿ, ಸತತ ಕಾನೂನು ಹೋರಾಟ ಮಾಡಿದ ಪರಿಣಾಮ ಹರೀಶ್ ಬಂಗೇರಾ ಆರೋಪಿ ಅಲ್ಲ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಗೊಂಡಿದ್ದಾರೆ, ಇಂದು ಬೆಂಗಳೂರಿಗೆ ಬಂದು, ನೆಮ್ಮದಿಯ ನಗೆ ಚೆಲ್ಲಿದ್ದಾರೆ.
ಒಟ್ಟಿನಲ್ಲಿ ತಡವಾಗಿಯಾದ್ರೂ ಸತ್ಯಕ್ಕೆ ಜಯ ದೊರೆತಿದೆ. ಹರೀಶ್ ಬಂಗೇರಾ ಸೌದಿ ಸೆರೆವಾಸದಿಂದ ಮುಕ್ತಗೊಂಡಿದ್ದಾರೆ. ಮುಂದೆ ಹರೀಶ್, ಪತ್ನಿ ಮಗಳೊಂದಿಗೆ ಸುಖವಾಗಿ ಬಾಳಲಿ ಅನ್ನೋದೇ ನಮ್ಮ ಹಾರೈಕೆ.
Kshetra Samachara
18/08/2021 04:50 pm