ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನೆ ತೊರೆದ ಅಸಹಾಯಕ ವೃದ್ಧರನ್ನು ಮತ್ತೆ ಕುಟುಂಬ ಸೇರಿಸಿದ 'ಟೀಮ್ ಬಿ ಹ್ಯೂಮನ್'

ಮಂಗಳೂರು: ಮನಸ್ತಾಪದಿಂದಾಗಿ ಮನೆ ತೊರೆದ ಕೇರಳದ ವೃದ್ಧರೋರ್ವರು ಮಂಗಳೂರಿನಲ್ಲಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡು ಬೀದಿಪಾಲಾಗಿದ್ದರು. ಕೊನೆಗೂ ಅಸಹಾಯಕರಾದ ಈ ವೃದ್ಧರನ್ನು 'ಟೀಮ್ ಬಿ ಹ್ಯೂಮನ್' ಸಂಸ್ಥೆಯ ಸಹಕಾರದಿಂದ ಕುಟುಂಬವನ್ನು ಮರಳಿ ಸೇರಿದ ಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪಯ್ಯನ್ನೂರು ಕಾವಂಚಲ್ ನ ಬಾಲನ್(69) ಎಂಬ ಈ ವೃದ್ಧರು ದಿನಕೂಲಿ ನೌಕರನಾಗಿ ದುಡಿಯುತ್ತಿದ್ದರು. ಪತ್ನಿ ಪಾರ್ವತಿ ಮತ್ತು ಪುತ್ರಿ ಶೀಬಾರೊಂದಿಗೆ ಜೀವಿಸುತ್ತಿದ್ದ ಬಾಲನ್, ಒಂದು ದಿನ ತಮ್ಮ ಕುಟುಂಬದೊಂದಿಗೆ ಮನಸ್ತಾಪ ಮಾಡಿಕೊಂಡು ಮನೆ ತೊರೆದೇ ಬಿಟ್ಟರು. ಬಾಲನ್ ಕೇರಳದಿಂದ ಹೊರಟವರು ಮಂಗಳೂರು ಸೇರಿದರು. ಆದರೆ, ಅದೇ ಸಮಯ ಕೊರೊನಾ ಲಾಕ್ ಡೌನ್ ಜಾರಿಯಾಯಿತು. ಮಂಗಳೂರಿಗೆ ಬಂದ ಬಾಲನ್ ಅವರು ಎಲ್ಲಿಗೂ ಹೋಗಲಾಗದೆ ಸಿಕ್ಕಿ ಹಾಕಿಕೊಂಡರು. ತಿರುಗಿ ಮನೆಗೆ ಹೋಗೋಣವೆಂದರೆ ಎಲ್ಲವೂ ಸ್ಥಗಿತವಾಗಿ ವಾಹನದ ವ್ಯವಸ್ಥೆಯೂ ಇರಲಿಲ್ಲ. ಜೊತೆಗೆ ಖರ್ಚಿಗೆ ಕೈಯಲ್ಲಿ ಹಣವೂ ಇರಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಇರುವಾಗಲೇ ಅ‌ದೊಂದು ದಿನ ಬಾಲನ್ ಅವರು ರಸ್ತೆ ದಾಟುತ್ತಿರುವ ಸಂದರ್ಭ ಅಪಘಾತಕ್ಕೊಳಗಾದರು. ಬಾಲನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ದುರಾದೃಷ್ಟವಶಾತ್ ಅವರು ತಮ್ಮ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಹೇಗೋ ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಾಲನ್ ಅಕ್ಷರಶಃ ಬೀದಿಪಾಲಾದರು.

ಈ ಸಂದರ್ಭ ಅವರು ಹಂಪನಕಟ್ಟೆಯ ಮಸ್ಜಿದ್ ನ್ನೂರ್ ಸಮೀಪದ ಫುಟ್ ಪಾತ್ ಒಂದರಲ್ಲಿ ಆಶ್ರಯ ಪಡೆಯುತ್ತಾರೆ.

ಅಸಹಾಯಕರಾಗಿರುವ ಬಾಲನ್ ಪರಿಸ್ಥಿತಿಯನ್ನು ಕಂಡು ಮರುಗಿದ ಮಸ್ಜಿದ್ ನ್ನೂರಿನ ಖತೀಬರು, ಪ್ರತಿದಿನ ಅವರಿಗೆ ಆಹಾರ ಒದಗಿಸುತ್ತಾರೆ. ಅವರ ದಾರುಣ ಸ್ಥಿತಿಯನ್ನು ಅರಿತ ಖತೀಬರು ಇದನ್ನು 'ಟೀಮ್ ಬಿ ಹ್ಯೂಮನ್' ಗೆ ತಿಳಿಸುತ್ತಾರೆ. ತಕ್ಷಣ ಸ್ಪಂದಿಸಿದ 'ಟೀಮ್ ಬಿ ಹ್ಯೂಮನ್' ಅವರನ್ನು ಆಶ್ರಯ ಕೇಂದ್ರಕ್ಕೆ ಕೊಂಡೊಯ್ದು ಎಲ್ಲ ಅಗತ್ಯ ಆರೈಕೆಗಳನ್ನು ಮಾಡುತ್ತಾರೆ.

ಈ ಸಂದರ್ಭ ಬಾಲನ್ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಾರೆ. ಮೊದಲಿಗೆ ಕುಟುಂಬದವರು ಬಾಲನ್ ಅವರನ್ನು ಮತ್ತೆ ತಮ್ಮ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಾರೆ. ಪಟ್ಟು ಬಿಡದ 'ಟೀಮ್ ಬಿ ಹ್ಯೂಮನ್' ಪಯ್ಯನ್ನೂರು ಕಾವಂಚಲ್ ಸಮೀಪದ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಹಾಗೂ ನೆರೆಹೊರೆಯವರನ್ನು ಸಂಪರ್ಕಿಸಿ ಬಾಲನ್ ಮನೆಯವರಿಗೆ ಮನವರಿಕೆ ಮಾಡಿಸುವಂತೆ ವಿನಂತಿಸುತ್ತಾರೆ.

ಈ ಎಲ್ಲ ಪ್ರಯತ್ನಗಳ ಫಲಶೃತಿಯಾಗಿ ಒಂದು ತಿಂಗಳ ಬಳಿಕ ಬಾಲನ್ ಕುಟುಂಬ ಅವರನ್ನು ಸ್ವೀಕರಿಸಲು ಒಪ್ಪಿಕೊಳ್ಳುತ್ತದೆ. ಇದರೊಂದಿಗೆ 'ಟೀಮ್ ಬಿ ಹ್ಯೂಮನ್' ಸಂಸ್ಥೆಯು ಅಸಹಾಯಕ ಸ್ಥಿತಿಯಲ್ಲಿದ್ದ ಬಾಲನ್ ರನ್ನು ಅವರ ಕುಟುಂಬದೊಂದಿಗೆ ಸೇರಿಸಿ ಸಾರ್ಥಕ್ಯ ಮೆರೆದಿದೆ.

Edited By : Vijay Kumar
Kshetra Samachara

Kshetra Samachara

12/02/2021 09:58 pm

Cinque Terre

19.46 K

Cinque Terre

1

ಸಂಬಂಧಿತ ಸುದ್ದಿ