ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೇವ ಸನ್ನಿಧಾನದಲ್ಲಿ ಸಿಕ್ಕಿದ ಭಿಕ್ಷೆ ಅನ್ನದಾನ ನಿಧಿಗೆ ಸಮರ್ಪಣೆ!; ಹೀಗೊಂದು ಭಿಕ್ಷುಕಿಯ ಹೃದಯ ಶ್ರೀಮಂತಿಕೆ

ಉಡುಪಿ: 'ಭವತಿ ಭಿಕ್ಷಾಂದೇಹಿ' ಎಂದು ಧಾರ್ಮಿಕ ಕ್ಷೇತ್ರಗಳಲ್ಲಿ ಭಿಕ್ಷೆ ಬೇಡಿದ ಹಣವನ್ನು ಅಜ್ಜಿಯೊಬ್ಬರು ದೇವಾಲಯಗಳಿಗೆ ದಾನ ಮಾಡಿದ್ದಾರೆ!

ಅನ್ನದಾನವೇ ಶ್ರೇಷ್ಠದಾನ' ಎಂದು ನಂಬಿರುವ ಈಕೆ ಭಿಕ್ಷೆ ಬೇಡಿ ದಾನ ಕೊಟ್ಟ ಹಣವಾದರೂ ಎಷ್ಟು ಗೊತ್ತಾ? ಈ ಸ್ಟೋರಿ ನೋಡೋಣ...

ಶ್ರೀ ಅಯ್ಯಪ್ಪ ವ್ರತಧಾರಿಯಾದ ಈ ವೃದ್ಧೆಯನ್ನು ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಜನ ಕಾಣುತ್ತಾರೆ. 'ಭಿಕ್ಷಾಂದೇಹಿ' ಎಂದು

ಜನರ ಮುಂದೆ ಕೈಚಾಚುವ ಈಕೆಗೆ ಅಷ್ಟೋ ಇಷ್ಟೋ ಹಣ ಕೊಡುತ್ತಾರೆ, ನಂತರ ಯಾರೋ ಭಿಕ್ಷುಕಿ ಎಂದು ಮರೆತುಬಿಡುತ್ತಾರೆ. ಆದರೆ, ಯಾವ ಧನಿಕನಿಗೂ ಇಲ್ಲದ ಹೃದಯ ಶ್ರೀಮಂತಿಕೆ ಈ ವೃದ್ಧ ಜೀವಕ್ಕೆಇದೆ ಅನ್ನೋದು ಈಗ ಸಾಬೀತಾಗಿದೆ!

ನೂರಲ್ಲ.. ಸಾವಿರವಲ್ಲ... ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಈಕೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರ ಸನ್ನಿಧಿಗೆ ದಾನ ನೀಡಿದ್ದಾರೆ! ದೇವಸ್ಥಾನದ ಅನ್ನ ಸಂತರ್ಪಣೆ ಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಪರಿಸರದ ಜನರು ಬೆಕ್ಕಸ ಬೆರಗಾಗಿದ್ದಾರೆ.

ಅಯ್ಯಪ್ಪ ಭಕ್ತೆಯಾದ ಈ ವ್ರತಧಾರಿ ವೃದ್ಧೆಯ ಹೆಸರು ಅಶ್ವತಮ್ಮ. ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಈಕೆ ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್ ಗೇಟ್ ಗಳಲ್ಲಿ ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಾರೆ. ಮಾಮೂಲಾಗಿ ಭಿಕ್ಷುಕರಿಗೆ ನೀಡುವಂತೆ ಈಕೆಗೂ ಎಲ್ಲರೂ ಹಣ ನೀಡುತ್ತಾರೆ.

ಹೀಗೆ ಸಂಗ್ರಹವಾದ ಹಣದಲ್ಲಿ ಈಕೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣವನ್ನು ದಾನವಾಗಿ ವಿವಿಧ ದೇವಾಲಯಗಳಿಗೆ ಕೊಟ್ಟಿದ್ದಾರೆ. ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5 ಲಕ್ಷ ರೂ. ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಶ್ರೀ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಲಾಗಿದೆ. ಶ್ರೀ ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳ ಪಂದಳ ಕ್ಷೇತ್ರದಲ್ಲಿ 30 ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಿ ದೇವಸ್ಥಾನಕ್ಕೂ 1.5 ಲಕ್ಷ ರೂ. ಕಾಣಿಕೆ ಸಮರ್ಪಿಸಿದ್ದಾರೆ.

ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ. ಭೋಜನ ನಿಧಿಗೆ ಅರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನೂ ಈಕೆ ದಾನ ಮಾಡುತ್ತಾ ಬಂದಿದ್ದಾರೆ.

ಈಕೆಯ ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಈಕೆ ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈಕೆಗೆ ಆರು ಮಂದಿ ಮೊಮ್ಮಕ್ಕಳಿದ್ದಾರೆ. ದೇವರ ಹೆಸರಲ್ಲಿ ಬೇಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ಧೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

.

ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By : Manjunath H D
Kshetra Samachara

Kshetra Samachara

05/02/2021 06:39 pm

Cinque Terre

22 K

Cinque Terre

9

ಸಂಬಂಧಿತ ಸುದ್ದಿ