ಬೈಂದೂರು: ಜಿಲ್ಲೆಯಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಮಾತಿಗೆ ಪುಷ್ಠಿ ಕೊಡುವಂತೆ, ಕುಂದಾಪುರ ಬಳಿಯ ಮೊವಾಡಿಯ ದಲಿತರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಪಂ ವ್ಯಾಪ್ತಿಯ ಮೊವಾಡಿ ಪರಿಶಿಷ್ಟ ಜಾತಿ, ಪಂಗಡದವರು ಹೋರಾಟ ಮೂಲಕ ಆರು ಎಕರೆ ಭೂಮಿ ಪಡೆದುಕೊಂಡಿದ್ದರು.
ಮೊದಲು 50 ಕುಟುಂಬಕ್ಕೆ ಭೂಮಿ ನೀಡುವ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದ್ದು, ಬಳಿಕ 50 ಜನರಲ್ಲಿ 28 ಜನರಿಗೆ ಸೈಟ್ ಮಂಜೂರುಗೊಳಿಸಿದೆ.
28 ಜನರ ಪೈಕಿ 14 ಕುಟುಂಬಕ್ಕೆ ಈಗಾಗಲೇ ಇದೇ ವರ್ಷ ಜನವರಿ 21 ರಂದು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯ ಹಕ್ಕುಪತ್ರ ವಿತರಿಸಿದೆ. ಮನೆ ನಿರ್ಮಿಸಿಕೊಳ್ಳಲು ನಿಗಮಕ್ಕೆ ಹಣವೂ ಬಂದಿದೆ. ಆದರೆ, ತಾಲೂಕು ಆಡಳಿತ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನಿವೇಶನ ವಿಂಗಡಿಸಿ ಕೊಡಲು ಮೀನಮೇಷ ಎಣಿಸುತ್ತಿದೆ.
ಇದೇ ವರ್ಷದ ಜನವರಿಯಲ್ಲಿ ಮನೆ ನಿರ್ಮಿಸಿಕೊಳ್ಳಲು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಹಣ ಬಂದರೂ ಕೂಡ, ಸೈಟ್ ವಿಂಗಡಿಸದಿರುವುದರಿಂದ ದಲಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.
ಈ ಹಿಂದೆ ವಾಸಿಸಲು ಜಾಗವಿಲ್ಲದೆ ದಲಿತರು ಮೊವಾಡಿ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿ ವಾಸ್ತವ್ಯ ಹೂಡಿದ್ದರು. ಅಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್, ದಲಿತರು ವಾಸವಿದ್ದ ಆರು ಎಕರೆ ಜಾಗ ದಲಿತರಿಗೇ ಮಂಜೂರುಗೊಳಿಸಿದ್ದರು.
ಆ ಬಳಿಕ ತ್ರಾಸಿ ಪಂಚಾಯತ್ ದಲಿತ ನಿವಾಸಿಗಳ ಸಹಕಾರದಿಂದ ಮರಗಳನ್ನು ತೆರವುಗೊಳಿಸಿ ಭೂಮಿ ಸಮತಟ್ಟುಗೊಳಿಸಿತ್ತು.
ನಂತರ ಜಿಲ್ಲಾಧಿಕಾರಿಯಾಗಿ ಬಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಾಂತ್ರಿಕ ತೊಡಕು ಸರಿಪಡಿಸಿ ದಲಿತ ಮುಖಂಡರ ಒತ್ತಾಯದ ಬಳಿಕ ಪ್ರತಿಯೊಬ್ಬರಿಗೂ 2.75 ಸೆಂಟ್ಸ್ ಇದ್ದುದನ್ನು 4.75 ಸೆಂಟ್ಸ್ ಗೆ ಏರಿಸಿದ್ದರು.
ಪ್ರತಿ ಮನೆಗೆ 3.80 ಲಕ್ಷ ಅನುದಾನ, ಅಂಬೇಡ್ಕರ್ ಅಭಿವೃದ್ಧಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಆರು ತಿಂಗಳ ಹಿಂದೆ ಬಂದಿದೆ. ಆದರೆ, ಸೈಟ್ ವಿಂಗಡಿಸದಿರುವುದರಿಂದ ಮನೆ ನಿರ್ಮಾಣ ಕಾರ್ಯಕ್ಕೆ ತೊಡಕುಂಟಾಗಿದೆ ಎಂದು ದಲಿತ ಕುಟುಂಬಗಳು ಆರೋಪಿಸಿವೆ.
ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಆದರೂ ನಮಗೆ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಗುಡಿಸಲು ನಿರ್ಮಿಸಿ, ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ದಲಿತ ಕುಟುಂಬಗಳು ಹೇಳಿವೆ.
ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಂತ್ರಸ್ತರಿಗೆ ನ್ಯಾಯ ನೀಡಬೇಕಿದೆ.
Kshetra Samachara
18/09/2020 10:16 pm