ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, 100ನೇ ಅಪರಿಚಿತ ಶವದ ಅಂತ್ಯಸಂಸ್ಕಾರವನ್ನು ಇಂದು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನಡೆಸುವ ಮೂಲಕ ನೂರು ವಾರೀಸುದಾರರಿಲ್ಲದ ಶವ ಸಂಸ್ಕಾರ ನಡೆಸಿದ ದಾಖಲೆಗೆ ಪಾತ್ರವಾಯಿತು.
ನ.11ರಂದು ಕಲ್ಯಾಣಪುರ ಸಂತೆಕಟ್ಟೆ ಪರಿಸರದಲ್ಲಿ ಅಪರಿಚಿತ ಗಂಡಸಿನ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಮೃತ ವ್ಯಕ್ತಿಯ ವಾರೀಸುದಾರರ ಪತ್ತೆಗಾಗಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿತ್ತು. ಕಾಲಮಿತಿ ಕಳೆದರೂ ವಾರೀಸುದಾರರು ಪತ್ತೆಯಾಗಿರಲಿಲ್ಲ. ಕಾನೂನಿನಂತೆ ಶವ ಮಹಜರು ಕಾನೂನು ಪ್ರಕ್ರಿಯೆ ನಡೆದ ಬಳಿಕ ನಗರ ಪೊಲೀಸ್ ಠಾಣೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರ ಪಡೆದು, ಅವರ ಮೂಲಕ ಅಂತ್ಯಸಂಸ್ಕಾರ ಗೌರವಪೂರ್ಣವಾಗಿ ನಡೆಸಿದರು. ಇದು ನಾಗರಿಕ ಸಮಿತಿಯಿಂದ ಅನಾಥರ, ವಾರೀಸುದಾರರು ಇಲ್ಲದ, ನೂರನೇ ಶವದ ಅಂತ್ಯಸಂಸ್ಕಾರ ಆಗಿರುವುದು ಉಲ್ಲೇಖನಿಯ.
ಹೂ ಹಾರ ಶವಕ್ಕೆ ಸಮರ್ಪಿಸಿ ಬಿದಿರಿನ ಚಟ್ಟದಲ್ಲಿಟ್ಟ ಶವವನ್ನು ಬೀಡಿನಗುಡ್ಡೆ ವೃತ್ತದಿಂದ ಹಿಂದು ರುದ್ರಭೂಮಿ ತನಕ ಶವಯಾತ್ರೆ ಮೂಲಕ ತರಲಾಯಿತು. ಚಟ್ಟದ ಮುಂದುಗಡೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಹೆಗಲು ನೀಡಿದರು. ಸಮಾಜಸೇವಕರಾದ ಅನ್ಸರ್ ಅಹಮದ್, ತಾರಾನಾಥ್ ಮೇಸ್ತ ಶಿರೂರು ಹೆಗಲು ನೀಡಿ ಸಾಗಿದರು. ಚಿತ್ಪಾಡಿಯ ಡೊಳ್ಳು ಬಳಗದವರು ಯಾತ್ರೆಯ ಉದ್ದಕ್ಕೂ ಡೋಲು ಬಾರಿಸಿ ಗೌರವ ಸಲ್ಲಿಸಿದರು.
ಅಂತ್ಯಸಂಸ್ಕಾರ ಕಾರ್ಯದಲ್ಲಿ ಸಮಾಜಸೇವಕ ಹಸನ್, ರಾಜೇಶ್ ಕಾಪು, ಫ್ರಾನ್ಸಿಸ್ ಡಿಸೋಜ ಕೊಳಲಗಿರಿ, ಸುಶೀಲಾ ರಾವ್ ಉಡುಪಿ ಮೊದಲಾದದವರು ಉಪಸ್ಥಿತರಿದ್ದರು. ಮೃತ ವ್ಯಕ್ತಿ ಯಾವ ಧರ್ಮದವರು ಎಂದು ತಿಳಿದು ಬಂದಿಲ್ಲ. ಆದರೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಬಂಧುಗಳಾಗಿ ಸೌಹಾರ್ದ ಭಾವನೆಯಿಂದ ಅಂತ್ಯಸಂಸ್ಕಾರ ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
15/11/2020 06:10 pm