ಉಡುಪಿ: ಕೃಷಿ ಅಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಕೃಷಿಅನ್ನೋ ಪ್ರಯೋಗ ಲಾಭದ ಕಡೆ ಮನಸ್ಸು ಮಾಡಿದರೆ ಮಹಿಳೆ ಕೂಡಾ ಯಶಸ್ಸು ಸಾಧಿಸಲು ಸಾಧ್ಯ ಅನ್ನೋದನ್ನು ಈ ಮಹಿಳೆ ತೋರಿಸಿ ಕೊಟ್ಟಿದ್ದಾರೆ. ಟ್ಯಾರೀಸ್ ಮೇಲೆ ಮಲ್ಲಿಗೆ ಬೆಳೆದು ಮಲ್ಲಿಗೆ ಕೃಷಿಯ ಪರಿಮಳವನ್ನು ಎಲ್ಲೆಡೆ ಪಸರಿಸೋ ಕಾರ್ಯ ಮಾಡಿದ್ದಾರೆ.
ಮನೆಯ ಟ್ಯಾರೀಸ್ ಮೇಲೆ ಮಲ್ಲಿಗೆ ಗಿಡದ ಆರೈಕೆ ಮಾಡ್ತಾ ಇರೋ ಈ ಮಹಿಳೆ ಹೆಸರು ಕುಂಭಾಸಿ ಪಣ್‌ಹತ್ವಾರ್‌ಬೆಟ್ಟಿನ ನಿವಾಸಿ ಪ್ರೇಮ. ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರೇಮ ಅವರಿಗೆ ಅದ್ಯಾಕೋ ತವರು ಮನೆಯಲ್ಲಿ ಬೆಳೆಸಿಕೊಂಡ ಬಂದ ಮಲ್ಲಿಗೆ ಕೃಷಿ ಅಂದ್ರೆ ಪಂಚ ಪ್ರಾಣ. ಮದುವೆಯಾಗಿ ಬಂದ ಮೇಲೂ ಅವರ ಮಲ್ಲಿಗೆ ಪ್ರೇಮ ಗಂಡನಮನೆಯಲ್ಲೂ ಬಿಡಲಿಲ್ಲ. ತವರಿನಲ್ಲಿ ಪರಂಪರಿಕವಾಗಿ ಮಾಡುತ್ತಿದ್ದ ಮಲ್ಲಿಗೆಯ ನಂಟು ಅವರನ್ನು ನೆನಪಿಸುತ್ತಲೇ ಇತ್ತು.
ಆದರೆ ಪತಿ ಮನೆಯಲ್ಲಿ ಮಲ್ಲಿಗೆ ಕೃಷಿಗೆ ಸ್ಥಳಾವಕಾಶದ ಕೊರತೆ ಕಾಡಿದಾಗ ಅವರ ಆಲೋಚನಾ ಲಹರಿ ಹರಿದಿದ್ದು ಟೆರೆಸ್ ಮೇಲಿನ ಖಾಲಿ ಜಾಗದತ್ತ. ಸುಮಾರು ೧೦೦ಕ್ಕೂ ಹೆಚ್ಚು ಕುಂಡಗಳನ್ನು ಖರೀದಿಸಿ ತಂದು ಅದಕ್ಕೆ ಮಣ್ಣು-ಸುಡುಮಣ್ಣು-ಸಾವಯವ ಪದಾರ್ಥಗಳನ್ನು ಮಿಶ್ರಣ ಮಾಡಿ ತಾಯಿ ಮನೆಯಿಂದ ಮಲ್ಲಿಗೆ ಗಿಡ ತಂದು ನಾಟಿ ಮಾಡಿಯೇ ಬಿಟ್ಟರು. ದಿನಕ್ಕೆರಡು ಬಾರಿ ನೀರುಣಿಸಿದರು. ಪ್ರೇಮದಿಂದ ಆರೈಕೆ ಮಾಡಿದ್ದೇ ತಡ ವರ್ಷದೊಳಗೆ ಮನೆ ಮಹಡಿಯಲ್ಲಿ ಮಲ್ಲಿಗೆ ಘಮ್ಮೆಂದುಬಿಟ್ಟಿದೆ.
ಮಹಿಳೆಯಾಗಿ ಸಾಧನೆ ಮಾಡಬೇಕು ಎನ್ನುವವರಿಗೆ ಈ ಗೃಹಿಣಿ ಒಳ್ಳೆಯ ಉದಾಹಣೆ. ಇವತ್ತು ಮನೆಯ ಟೆರೆಸ್ ಮೇಲೆ ೧೨೦೦ ಚದರ ಅಡಿ ಪ್ರದೇಶದಲ್ಲಿ ಸಮೃದ್ದವಾಗಿ ಬೆಳೆದಿರುವ ೧೧೦ ಕ್ಕೂ ಹೆಚ್ಚು ಮಲ್ಲಿಗೆ ಗಿಡಗಳು ಹೂ ಬಿಡುತ್ತಿವೆ. ಈ ಸಮಯದಲ್ಲಿ ಕನಿಷ್ಠ ೨-೩ ಸಾವಿರ ಹೂ ಸಿಗುತ್ತಿವೆ.
ಸಂದೇಶ್ ಶೆಟ್ಟಿ ಆಜ್ರಿ : ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
27/10/2020 08:13 am