ಉಡುಪಿ: ಕಳೆದ 18 ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ನಾಲ್ಕು ವಾರ್ಡ್ ನ ಕಸ ವಿಲೇವಾರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಲಿತ ಮಹಿಳೆ ಸುಂದರಿ ಎಂಬವರನ್ನು ನಗರಸಭೆ ಸದಸ್ಯರು ಮತ್ತು ಶಾಸಕರು ಸೇರಿ ದೂರದ ಶೆಟ್ಟಿಬೆಟ್ಟು ಎಂಬ ವಾರ್ಡ್ ಗೆ ಕಳುಹಿಸಿದ್ದು, ತಮಗೆ ಅನ್ಯಾಯ ಆಗಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
18 ವರ್ಷಗಳಿಂದ ಪುತ್ತೂರು ವಾರ್ಡ್ ನ ಮಹಿಳೆ ಸುಂದರಿ ಅವರು ನಗರದ ನಾಲ್ಕು ವಾರ್ಡ್ ಗಳಲ್ಲಿ ಕಸ ವಿಲೇವಾರಿ ಮಾಡಿ ಜೀವನ ಸಾಗಿಸುತ್ತಿದ್ದರು. ನೀವು ನಂಬಲಿಕ್ಕಿಲ್ಲ , ಈ ಪ್ರಾಯದಲ್ಲೂ ಖುದ್ದು ತಾವೇ ವಾಹನ ಚಲಾಯಿಸಿ ಇವರು ಸೇವೆ ಮಾಡುತ್ತಿದ್ದರು. ಕಸ ವಿಲೇವಾರಿ ಮಾಡಿದ್ದಕ್ಕೆ ಪ್ರತೀ ಮನೆಯವರು ಕೊಡುವ ಅಲ್ಪ ಸ್ವಲ್ಪ ದುಡ್ಡಿನಿಂದಲೇ ಸ್ವಂತ ವಾಹನ ಖರೀದಿಸಿ ನಗರ ಸ್ವಚ್ಛವಾಗಿಡುತ್ತಿದ್ದರು.
ಇಂತಹ ಮಹಿಳೆಗೆ ಈಗ ಏಕಾಏಕಿ ನಗರಸಭೆ ಅಧಿಕಾರಿಗಳು, ಸದಸ್ಯರು ಮತ್ತು ಶಾಸಕರು ಸೇರಿ ದೂರದ ಶೆಟ್ಟಿಬೆಟ್ಟು ವಾರ್ಡೊಂದನ್ನು ನೀಡಿ ಅನ್ಯಾಯ ಮಾಡಿದ್ದಾರೆ. ನಗರಸಭೆ ಹೊಸ ನಿಯಮದ ಪ್ರಕಾರ ನಗರಸಭೆ ವಾರ್ಡ್ ನ ಕಸ ವಿಲೇವಾರಿ ಜವಾಬ್ದಾರಿ ನಗರಸಭೆ ಸದಸ್ಯರಿಗೇ ನೀಡಲಾಗಿದೆ. ಅವರು ತಮಗೆ ಬೇಕಾದವರಿಗೆ ಒಳ ಒಪ್ಪಂದ ಮಾಡಿ ವಿಲೇವಾರಿ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಇದರಿಂದಲೇ ಜೀವನ ಸಾಗಿಸುತ್ತಿದ್ದ ಸುಂದರಿ ಈಗ ಜೀವನ ನಿರ್ವಹಣೆಗೂ ಪರಿತಪಿಸುತ್ತಿದ್ದಾರೆ. ಸ್ವಂತ ವಾಹನ ಖರೀದಿಸುವಾಗ ಸಾಲ ಇದ್ದು,ಮಕ್ಕಳ ಜೀವನ ನಿರ್ವಹಣೆಗೂ ಕಷ್ಟ ಪಡುತ್ತಿದ್ದಾರೆ. ಉಡುಪಿ ಶಾಸಕರು, ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
25/10/2020 02:59 pm