ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ನಗರದ ಕೂಸಮ್ಮ ಶಂಭು ಶೆಟ್ಟಿ, ಹಾಜಿ ಅಬ್ದುಲ್ಲ ಸ್ಮಾರಕ ತಾಯಿ- ಮಕ್ಕಳ ಆಸ್ಪತ್ರೆಗೆ ತಕ್ಷಣ 'ಚಿಕಿತ್ಸೆ' ನೀಡಬೇಕಾಗಿದೆ. 4 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಆಸ್ಪತ್ರೆಯ ಸದ್ಯದ ಸ್ಥಿತಿ ತೂಗುಯ್ಯಾಲೆಯಲ್ಲಿದೆ.ಬಿ.ಆರ್. ಶೆಟ್ಟಿ ಸಾಮ್ರಾಜ್ಯ ಪತನ ಬಳಿಕ ಈ ಆಸ್ಪತ್ರೆ ಕೂಡ ಕೋಮಾ ತಲುಪಿದೆ!
ಹಾಗೆ ನೋಡಿದರೆ ಈ ಆಸ್ಪತ್ರೆ ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಹೆಗ್ಗಳಿಕೆ ಹೊಂದಿತ್ತು. ಇದೊಂದು ರೀತಿ ಸರಕಾರಿ ಖಾಸಗಿ ಸಹಭಾಗಿತ್ವದ ಆಸ್ಪತ್ರೆ. ಹಳೆ ಸರಕಾರಿ ಆಸ್ಪತ್ರೆಯ ಜಾಗವನ್ನು ಉದ್ಯಮಿ ಬಿ.ಆರ್. ಶೆಟ್ಟಿಗೆ ನೀಡಿ, ಈ ಆಸ್ಪತ್ರೆಯನ್ನು ಬಿ.ಆರ್ . ಶೆಟ್ಟಿ ನಡೆಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಿರೀಕ್ಷೆಯಂತೆಯೇ ಇಲ್ಲಿ ಬಡ ಮಹಿಳೆಯರು, ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿತ್ತು. 11 ಸಾವಿರದಷ್ಟು ಉಚಿತ ಹೆರಿಗೆ ಆದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಆದರೆ, ಬಡವರ ಹಾಗೂ ಆಸ್ಪತ್ರೆ ಸಿಬ್ಬಂದಿಯ ದೌರ್ಭಾಗ್ಯ ಎನ್ನಬೇಕು.
ಉದ್ಯಮಿ ಬಿ.ಆರ್. ಶೆಟ್ಟರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮ ಈ ಆಸ್ಪತ್ರೆ ನಿರ್ವಹಣೆಯೇ ಕಷ್ಟವಾಗಿದೆ. ಸಿಬ್ಬಂದಿ ಮತ್ತು ವೈದ್ಯರಿಗೆ ಸಂಬಳ ನೀಡುವುದಕ್ಕೇ ಬಿ.ಆರ್. ಎಸ್. ಮ್ಯಾನೇಜ್ ಮೆಂಟಿಗೆ ಸಾಧ್ಯವಾಗುತ್ತಿಲ್ಲ. ಪರಿಣಾಮ ಸಿಬ್ಬಂದಿ ಹಲವು ಬಾರಿ ಕರ್ತವ್ಯ ಮಾಡದೆ ವೇತನಕ್ಕಾಗಿ ಧರಣಿ ಮಾಡುವುದು ನಡೆಯುತ್ತಿರುತ್ತದೆ. ಇಂದು ಕೂಡ ಬಹುತೇಕ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.
ಇಂದು ಬೆಳಿಗ್ಗೆ ಗರ್ಭಿಣಿಯರು ಮತ್ತು ಮಕ್ಕಳಿಗೆ ಚಿಕಿತ್ಸೆ ಸಿಗಲಿಲ್ಲ. ಹೆಚ್ಚಿನ ಸಂಖ್ಯೆಯ ಗರ್ಭಿಣಿಯರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವತ್ತಿನ ಮುಷ್ಕರದಿಂದಾಗಿ ಅವರೆಲ್ಲ ವಾಪಸಾಗಬೇಕಾಯಿತು.
ಕಳೆದ ಆರೆಂಟು ತಿಂಗಳಲ್ಲಿ ಹಲವು ಬಾರಿ ಇಲ್ಲಿಯ ವೈದ್ಯರು, ಸಿಬ್ಬಂದಿ ಧರಣಿಯ ಮೊರೆ ಹೋಗಿದ್ದರು. ಸ್ವಲ್ಪ ಮಟ್ಟಿಗೆ ವೇತನ ಪಾವತಿಯಾಗಿದ್ದರೂ ಸಿಬ್ಬಂದಿಗೆ ಮ್ಯಾನೇಜ್ ಮೆಂಟ್ ಮೇಲೆ ನಂಬಿಕೆ ಉಳಿದಿಲ್ಲ. ಈಗ 3 ತಿಂಗಳ ವೇತನ ಬಾಕಿ ಇದ್ದು, ಅದು ಪಾವತಿಯಾಗುವ ತನಕ ಸೇವೆಗೆ ಬರುವುದಿಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಸರಕಾರ ಮಧ್ಯ ಪ್ರವೇಶ ಮಾಡಿ ಈ ಆಸ್ಪತ್ರೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ.
Kshetra Samachara
21/02/2022 07:36 pm