ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಾದ ಪೊಲೀಸ್, ಕಂದಾಯ, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತಿತರ ಸಿಬ್ಬಂದಿಗಳಿಗೆ ಇಂದಿನಿಂದ ಬೂಸ್ಟರ್ ಡೋಸ್ ನೀಡಿಕೆ ಪ್ರಾರಂಭಗೊಂಡಿತು.ಕೋವಿಡ್ 3ನೇ ಅಲೆ ಬಾಧಿಸದಂತೆ ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೂ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕೆ ನೀಡಲಾಗುತ್ತಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇವತ್ತು ಬೂಸ್ಟರ್ ಡೋಸ್ ಗೆ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ 2ನೇ ಡೋಸ್ ಕೋವಿಶೀಲ್ಡ್ ಅಥವಾ 2ನೇ ಡೋಸ್ ಕೋವ್ಯಾಕ್ಸಿನ್ ಪಡೆದು 9 ತಿಂಗಳು ಪೂರೈಸಿದವರಿಗೆ (39 ವಾರಗಳು) ಸರಕಾರಿ ಲಸಿಕಾ ಕೇಂದ್ರದಲ್ಲಿ ಉಚಿತ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕೆಯನ್ನು ನೀಡಲಾಗುವುದು. 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮುನ್ನೆಚ್ಚರಿಕೆ ಲಸಿಕಾ ಡೋಸ್ ಆಗಿ ಕೋವಿಶೀಲ್ಡ್ ಲಸಿಕೆಯನ್ನೇ ಪಡೆಯಬೇಕು. ಅದೇ ರೀತಿ 2 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಮುನ್ನೆಚ್ಚರಿಕೆ ಲಸಿಕಾ ಡೋಸ್ ಆಗಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆಯಬೇಕು.
ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಕಾರ್ಯಕರ್ತರಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ/ಕ್ಲಿನಿಕ್, ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು, ಸರಕಾರಿ ಮತ್ತು ಖಾಸಗಿ ಆಯುಷ್ ಇಲಾಖೆಯ ಅಧಿಕಾರಿಗಳು/ನೌಕರರು/ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಅರ್ಹ ರಿರುತ್ತಾರೆ. 2ನೇ ಡೋಸ್ ಪಡೆದು 9 ತಿಂಗಳು ಪೂರೈಸಿದ್ದನ್ನು ಖಚಿತ ಪಡಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ.
Kshetra Samachara
10/01/2022 12:14 pm