ಮೂಡುಬಿದಿರೆ: "ಸ್ವಚ್ಛ ಮೂಡುಬಿದಿರೆ" ಪರಿಕಲ್ಪನೆಯೊಂದಿಗೆ ಸಾರ್ವಜನಿಕರು, ತಾಲೂಕಿನ ನಾನಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಮುಖಾಂತರ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮೂಡುಬಿದಿರೆ ಪುರಸಭೆಯು ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ್ ಯೋಜನೆಯಡಿ ನಡೆಯುತ್ತಿರುವ 'ಸ್ವಚ್ಛ ಸರ್ವೇಕ್ಷಣ 2022' ಸ್ವಚ್ಛತೆ ಜಾಗೃತಿ ಕುರಿತ ಸ್ಪರ್ಧೆಯನ್ನು ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದ್ದು, ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಭಿತ್ತಿಚಿತ್ರ ರಚಿಸುವ ಸ್ಪರ್ಧೆ ಪೇಟೆಯ ವಿವಿಧ ಭಾಗಗಳಲ್ಲಿ ನಡೆಯಿತು.
ಆಸಕ್ತ ನಾಗರಿಕರು, ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಆಳ್ವಾಸ್ ಕಾಲೇಜು, ಎಕ್ಸ್ ಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಹಿತ ನಾನಾ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಚ್ಛತೆಯ ಜಾಗೃತಿ ಮೂಡಿಸಲು ತಮ್ಮದೇ ಶೈಲಿಯಲ್ಲಿ ಚಿತ್ರ ಬಿಡಿಸಿದರು.
ಪೇಟೆಯ ಶ್ರೀ ಸತ್ಯನಾರಾಯಣ ದೇವಸ್ಥಾನ ಸಮೀಪ, ಜ್ಯೋತಿನಗರ ಶ್ರೀ ಆಯ್ಯಪ್ಪ ಮಂದಿರ, ಪೇಟೆಯ ಶ್ರೀ ಹನುಮಂತ ದೇವಸ್ಥಾನ, ರಿಂಗ್‌ರೋಡ್ ಬಳಿಯ ಈಜುಕೊಳ, ಸಮುದಾಯ ಆರೋಗ್ಯ ಕೇಂದ್ರದ ಆವರಣ ಗೋಡೆ, ಜೈನಪೇಟೆಯಲ್ಲಿರುವ ಶೌಚಾಲಯ, ಸ್ವರಾಜ್ಯ ಮೈದಾನದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಸ್ವಚ್ಛತೆಯ ಅರಿವು ಮೂಡಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸಲಾಯಿತು.
Kshetra Samachara
01/12/2021 11:52 am