ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಹೋಟೆಲೊಂದರ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಹರಿಯ ಬಿಡುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂಬ ಸ್ಥಳೀಯರ ದೂರಿನ ಅನ್ವಯ ಮುಲ್ಕಿ ನಗರ ಪಂಚಾಯತ್ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು ತಾತ್ಕಾಲಿಕ ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸ್ಥಗಿತಗೊಳಿಸಿದೆ.
ಕಳೆದ ಹಲವಾರು ವರ್ಷಗಳಿಂದ ಮುಲ್ಕಿಯ ಕಾರ್ನಾಡ್ ಜಂಕ್ಷನ್ ನಲ್ಲಿರುವ ಪೂಜಾ ಹೋಟೆಲ್ ನ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಬಿಡುತ್ತಿದ್ದು ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯತ್ ಗೆ ಸ್ಥಳೀಯ ನಾಗರಿಕರು ದೂರು ನೀಡಿದ್ದರು. ಕಳೆದ ಕೆಲ ತಿಂಗಳ ಹಿಂದೆ ಮುಲ್ಕಿ ನಗರ ಪಂಚಾಯತ್ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತೆರೆದ ಚರಂಡಿಯನ್ನು ಮುಚ್ಚಿ ತ್ಯಾಜ್ಯ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಹೋಟೆಲ್ ಮಾಲೀಕರಿಗೆ ತಾಕೀತು ಮಾಡಿದ್ದರು. ಆದರೂ ಹೋಟೆಲು ಮಾಲೀಕರ ನಿರ್ಲಕ್ಷದ ಹಿನ್ನೆಲೆಯಲ್ಲಿ ನಗರ ಪಂಚಾಯತ್ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಮಂಗಳವಾರ ಹೋಟೆಲ್ ವಿರುದ್ಧ ತಾತ್ಕಾಲಿಕ ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಹಾಗೂ ಮುಂದಿನ ಒಂದು ವಾರದಲ್ಲಿ ಹೋಟೆಲ್ ತ್ಯಾಜ್ಯ ನೀರಿನ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಹೋಟೆಲಿನ ಪರವಾನಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಾರ್ನಾಡಿನ ಪೂಜಾ ಹೋಟೆಲ್ ಹಾಗೂ ಬಾರ್ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಬಿಡುತ್ತಿದ್ದು ಪರಿಸರವಿಡೀ ದುರ್ವಾಸನೆ ಬೀರುತ್ತಿತ್ತು ಅಲ್ಲದೆ ಇದೇ ಜಂಕ್ಷನ್ ಬಳಿಯಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿದೆ. ಕೂಡಲೇ ಅದನ್ನು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
25/11/2020 09:34 am