ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶದಂತೆ ಭಾನುವಾರದ ಕೊರೊನಾ ವೀಕೆಂಡ್ ಕರ್ಫ್ಯೂ ಮುಲ್ಕಿಯಲ್ಲಿ ಯಶಸ್ವಿಯಾಗಿದೆ. ಮಧ್ಯಾಹ್ನ 2 ಗಂಟೆವರೆಗೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಾರ-ವಹಿವಾಟು ಭರ್ಜರಿಯಾಗಿದ್ದು ಬಳಿಕ ತಾಲೂಕು ಸ್ತಬ್ಧವಾಗಿದೆ.
ಭಾನುವಾರದ ವೀಕೆಂಡ್ ಕರ್ಫ್ಯೂ ನಡುವೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ನೇತೃತ್ವದಲ್ಲಿ ನಗರ ಪಂಚಾಯತ್ ಪೌರಕಾರ್ಮಿಕರು ಗೇರುಕಟ್ಟೆ ಬಳಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರತರಾಗಿದ್ದರು.
ಭಾರಿ ಮಳೆ ಗಾಳಿಯಿಂದ ಮುಲ್ಕಿ ತಾಲೂಕು ವ್ಯಾಪ್ತಿಯ ಶಿಮಂತೂರು ಕುಬೆವೂರು, ಅತಿಕಾರಿಬೆಟ್ಟು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಮನೆಯಲ್ಲಿ ರಜಾ ಮೂಡ್ ನಲ್ಲಿದ್ದ ಗ್ರಾಹಕರು ಕಿರಿಕಿರಿ ಅನುಭವಿಸಿದರು.
ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ತಡೆರಹಿತ ಹಾಗೂ ಸರಕಾರಿ ಬಸ್ಸುಗಳು ಎಂದಿನಂತೆ ಸಂಚರಿಸಿದ್ದರೆ ಕಿನ್ನಿಗೋಳಿ-ಕಟೀಲು ಮೂಡಬಿದ್ರೆ ಕಡೆಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ವೀಕೆಂಡ್ ಕರ್ಫ್ಯೂ ನಡುವೆ ಕಲಬುರ್ಗಿಯಿಂದ ಕೆಲಸ ಹುಡುಕಿಕೊಂಡು ಮುಲ್ಕಿಗೆ ಬಂದಿದ್ದ ವ್ಯಕ್ತಿಯೊಬ್ಬರು ಹಸಿವಿನಿಂದ ಬಳಲುತ್ತಿದ್ದು ಮುಲ್ಕಿ ಹೋಟೆಲ್ ಮಾಲೀಕ ಅಮಿತ್ ಮಾನವೀಯತೆ ಮೆರೆದು ಊಟ ನೀಡಿದ್ದಾರೆ.ಉಳಿದಂತೆ ಸದಾ ಬ್ಯೂಸಿಯಾಗಿರುವ ಕಾರ್ನಾಡ ಪೇಟೆಯಲ್ಲಿ ಮೆಡಿಕಲ್ ಸಹಿತ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದ್ದು ಕೊರೊನಾ ವೀಕೆಂಡ್ ಕರ್ಫ್ಯೂ ಮುಲ್ಕಿ ತಾಲೂಕಿನಲ್ಲಿ ಯಶಸ್ವಿಯಾಗಿದೆ
Kshetra Samachara
05/09/2021 07:45 pm