ಕಡಬ: ಗ್ರಾಮಾಭಿವೃದ್ಧಿಯ ಪ್ರಗತಿ ಬಂಧು ತಂಡದ ಕೆಲಸ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸಲಾದ ಮಾಂಸಹಾರ ಸೇವಿಸಿ ಕೆಲಸಕ್ಕೆ ಬಂದಿದ್ದವರು ಮತ್ತು ಮನೆಮಂದಿಯ ಆರೋಗ್ಯದಲ್ಲಿ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ಮಧ್ಯೆ ಕೆಲಸಕ್ಕೆ ಬಂದು ಆಹಾರ ಸೇವಿಸಿದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಬಲ್ಯ ಸಮೀಪದ ಗಾಣದಕೊಟ್ಟಿಗೆ ಎಂಬಲ್ಲಿ ಅ.1ರಂದು ನಡೆದಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಲ್ಯ ಗ್ರಾಮದ ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ(60.ವ) ಎಂಬವರು ಮೃತಪಟ್ಟವರು.
ಈ ಬಗ್ಗೆ ದೇವಪ್ಪ ಗೌಡ ಎಂಬವರ ಪುತ್ರಿ ಶೀಲಾ ಎಂಬವರು ದೂರು ನೀಡಿ, ನಾನು ಸೆ.26ರಂದು ತನ್ನ ತವರು ಮನೆಯಾದ ಬಲ್ಯ ಗ್ರಾಮದ ಗಾಣದಕೊಟ್ಟಿಗೆ ಎಂಬಲ್ಲಿಗೆ ಬಂದಿದ್ದು ಆ ದಿನ ನನ್ನ ತ೦ದೆ ದೇವಪ್ಪ ಗೌಡರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸಂಘದ ಅಡಿಯಲ್ಲಿ ಕೂಲಿ ಕೆಲಸ ಮಾಡಲು ಸಂಘದ ಗುಂಪಿನವರೊಂದಿಗೆ ಸೇರಿಕೊಂಡು ನೆರೆಮನೆಯ ಸಂಜೀವ ದೇವಾಡಿಗರವರ ಮನೆಗೆ ಹೋಗಿದ್ದರು.
ಅಲ್ಲಿ ಮಧ್ಯಾಹ್ನದ ಊಟಕ್ಕೆ ಮಾಡಲಾಗಿದ್ದ ಕೋಳಿ ಪದಾರ್ಥ ಸೇವಿಸಿದ್ದರು. ಕೆಲಸಕ್ಕೆ ಬಂದಿದ್ದ ಆನಂದಗೌಡ ಮತ್ತು ಮನೆ ಮಾಲಿಕ ಸಂಜೀವ ದೇವಾಡಿಗ ಮತ್ತು ಮನೆ ಮಂದಿ 3 ಆ ಆಹಾರವನ್ನು ತಿಂದಿದ್ದರು. ಬಳಿಕ ಸಂಜೆಯವರೆಗೆ ಸಂಜೀವ ದೇವಾಡಿಗರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದಿದ್ದರು, ಈ ವೇಳೆ ದೇವಪ್ಪ ಗೌಡರಿಗೆ ವಾಂತಿ ಹಾಗೂ - ಹೊಟ್ಟೆ ನೋವು ಉಂಟಾದ್ದರಿಂದ ಅವರನ್ನು ನಾನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದೇನೆ.
ಸಂಜೀವ ದೇವಾಸಿಗರ ಮನೆಯಲ್ಲಿ ಊಟ ಮಾಡಿದ ಆನಂದ ಗೌಡ, ಸಂಜೀವ ದೇವಾಡಿಗರ ಪತ್ನಿ ಗೀತಾ ಮತ್ತು ಮಕ್ಕಳಾದ ಶ್ರೇಯಾ, ಶ್ರಾವಣ್ರವರಿಗೂ ಸಹ ವಾಂತಿ ಹಾಗೂ ಹೊಟ್ಟೆ ನೋವು ಉಂಟಾಗಿದ್ದರಿಂದ ಅವರು ಸಹ ನೆಲ್ಯಾಡಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ದೇವಪ್ಪ ಗೌಡರಿಗೆ ಆರೋಗ್ಯದಲ್ಲಿ ಆ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೆ.30ರಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೊಯ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದರು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅ.1 ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
02/10/2021 11:30 am