ಮಂಗಳೂರು: ಶೈಕ್ಷಣಿಕವಾಗಿ ಸದಾ ಮುಂದಿರುವ ಕರಾವಳಿಗರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮಾತ್ರ ಹಿಂದೇಟು ಹಾಕುತ್ತಿರುತ್ತಾರೆ. ಹಾಗಾಗಿ ಪೊಲೀಸ್ ಇಲಾಖೆ, ಸರಕಾರದ ವಿವಿಧ ಇಲಾಖಾ ಹುದ್ದೆಗಳಲ್ಲಿ ಕರಾವಳಿಯ ಮಂದಿ ವಿರಳವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಗರನ್ನು ಸ್ಪರ್ಧಾತ್ಮಕ ಪರೀಕ್ಷೆಯತ್ತ ಮುಖ ಮಾಡಿಸಲು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ.
ಮಂಗಳೂರಿನ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗಾಗಿ ಕಾರ್ಯಾಗಾರವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ನಗರದ ವಿವಿಧ ಕಾಲೇಜಿನ 600-700 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಎಸ್ಪಿ, ಋಷಿಕೇಶ್ ಸೋನಾವಾಣೆ, ಪುತ್ತೂರು ಡಿಎಸ್ಪಿ ಗಾನಾ ಪಿ.ಕುಮಾರ್, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ತಮ್ಮ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಅನುಭವವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿದರು.
ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಇಲಾಖೆಗೆ ಸೇರ್ಪಡೆಗೊಂಡಿರುವ 6 ಮಂದಿ ಪೊಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಈ ಮೂಲಕ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಬೇಕೆಂದು ತರಬೇತಿ ನೀಡಿದ್ದಾರೆ. ಈ ಮೂಲಕ ಕರಾವಳಿಯ ಯುವಜನತೆಯೂ ಇಲಾಖಾ ಪರೀಕ್ಷೆಯತ್ತ ಮುಖ ಮಾಡಲು ಪ್ರೋತ್ಸಾಹ ನೀಡಲಾಗಿದೆ. ಕರಾವಳಿಯಲ್ಲಿ ಈವರೆಗೆ ಇಂತಹ ತರಬೇತಿ ಕಾರ್ಯಾಗಾರ, ಇಂತಹ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ ನಡೆದಿಲ್ಲ. ಪೊಲೀಸ್ ಕಮಿಷನರ್ ಅವರ ಸ್ವಹಿತಾಸಕ್ತಿಯಿಂದ ಈ ರೀತಿಯ ಕಾರ್ಯಾಗಾರ ಆಯೋಜನೆಗೊಂಡಿದೆ. ಈ ಮೂಲಕ ಕರಾವಳಿಯ ಮುಂದಿನ ಪೀಳಿಗೆಯು ಇಲಾಖಾ ಹುದ್ದೆಗಳನ್ನು ಏರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
Kshetra Samachara
05/06/2022 10:05 am