ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸುದೀರ್ಘ ಅವಧಿಯ ಬಳಿಕ ಹಲವು ಮುನ್ನೆಚ್ಚರಿಕೆಗಳೊಂದಿಗೆ ಶಾಲೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ತರಗತಿಯಲ್ಲಿ ಕುಳಿತುಕೊಂಡು ಪಾಠ ಕೇಳಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಬಂಟ್ವಾಳದ ಹೈಸ್ಕೂಲುಗಳಲ್ಲಿ ಶಾಲಾರಂಭ ನಡೆಯಿತು. ಈ ಸಂದರ್ಭ ಮೆರವಣಿಗೆಗಳೂ ನಡೆದವು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕೊಯಿಲ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂವನ್ನು ನೀಡಿ ಸ್ವಾಗತಿಸಿ, ಪೋಷಕರ ಸಭೆಯಲ್ಲಿ ಭಾಗವಹಿಸಿದರು.
ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟ ಶಾಲೆಗಳು ಸುಮಾರು 10 ತಿಂಗಳ ಬಳಿಕ ತೆರೆದಿದ್ದು, ವಿದ್ಯಾರ್ಥಿಗಳು ಮುಂಜಾಗರೂಕತಾ ಕ್ರಮ ಅನುಸರಿಸಿ ತರಗತಿಗಳಲ್ಲಿ ನಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಈ ಶೈಕ್ಷಣಿಕ ವರ್ಷವನ್ನು ಸದುಪಯೋಗ ಪಡೆಯುವಂತೆ ತಿಳಿಸಿದರು. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಭಯಭೀತರಾಗದೆ ಸರಕಾರ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಪಾಲಿಸಿ ವಿದ್ಯಾರ್ಜನೆಗೆ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಹೇಳಿದರು. ಶಿಕ್ಷಕರಿಗೆ ಈ ಬಾರಿ ತಮ್ಮ ಜವಬ್ದಾರಿ ಇನ್ನೂ ಹೆಚ್ಚಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಅವರ ಆರೋಗ್ಯದ ಬಗ್ಗೆಯು ಗಮನ ಹರಿಸುವಂತೆ ಹೇಳಿದರು.
Kshetra Samachara
01/01/2021 04:12 pm