ಮಂಗಳೂರು: ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಏಕಾಏಕಿ ಭುಗಿಲೆದ್ದ ಹಿಜಾಬ್ ವಿವಾದ ವಿಚಾರ ಬೂದಿ ಬುಚ್ಚಿದ ಕೆಂಡದಂತಿದ್ದು, ಹಿಜಾಬ್ ಬೇಕೆಂದು ಪಟ್ಟು ಹಿಡಿದಿರುವ 16 ಹಿಜಾಬ್ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಕಾಲೇಜಿನಿಂದ ಹೊರ ನಡೆದಿದ್ದಾರೆ.
ಶನಿವಾರವೂ ಈ 16 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದ್ದರು. ಆದರೆ ಪ್ರಾಂಶುಪಾಲೆ ಅವರನ್ನು ತರಗತಿ ಹಾಗೂ ಲೈಬ್ರರಿ ಪ್ರವೇಶಕ್ಕೆ ನಿರಾಕರಿಸಿದ್ದರು. ಅಲ್ಲದೆ ಶುಕ್ರವಾರ ಮಂಗಳೂರು ವಿವಿ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ನಿರ್ಧಾರದಂತೆ ತರಗತಿ ಹಾಗೂ ಲೈಬ್ರೆರಿಗೆ ಹಿಜಾಬ್ ಸಹಿತ ಪ್ರವೇಶವನ್ನು ಖಡಾಖಂಡಿತವಾಗಿ ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಬಂದಿರುವ ವಿದ್ಯಾರ್ಥಿನಿಯರು ಮನೆಯತ್ತ ತೆರಳಿದ್ದರು.
ಆದರೆ ಕಾಲೇಜಿನಲ್ಲಿ ಬುರ್ಖಾ ಧರಿಸಿ ಕಾಲೇಜಿಗೆ ಆಗಮಿಸುವ 44 ವಿದ್ಯಾರ್ಥಿನಿಯರು ಇದ್ದು, ಅವರಲ್ಲಿ 16 ಮಂದಿ ಮಾತ್ರ ಹಿಜಾಬ್ ಧರಿಸಿಯೇ ತರಗತಿಯಲ್ಲಿ ಪಾಠ ಕೇಳುವ ಅವಕಾಶಕ್ಕೆ ಪಟ್ಟು ಹಿಡಿದಿದ್ದರು. ಆದರೆ ಉಳಿದ ವಿದ್ಯಾರ್ಥಿನಿಯರು ಇಂದು ಕೂಡಾ ವಿಶ್ರಾಂತಿ ಕೊಠಡಿಯಲ್ಲಿ ಬುರ್ಖಾ ಮತ್ತು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಇಂದು ಕಾಲೇಜು ಗೇಟ್ ಬಳಿ ಐಡಿ ಕಾರ್ಡ್ ತಪಾಸಣೆ ಬಳಿಕ ಒಳ ಹೋಗಲು ಅವಕಾಶ ನೀಡಲಾಗಿದೆ.
ಆದರೆ ಹಿಜಾಬ್ ಗೆ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಹಿಜಾಬ್ ತೆಗೆದಿಟ್ಟರೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೆ ಹೋಗಿರುವ ಈ ವಿದ್ಯಾರ್ಥಿನಿಯರು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರರವರ ಬಳಿ ಹೋಗಿ ಹಿಜಾಬ್ ಗೆ ಅವಕಾಶ ಕೊಡುವಂತೆ ಮನವಿ ಮಾಡುವ ಸಾಧ್ಯತೆಯಿದೆ.
PublicNext
30/05/2022 01:39 pm