ಬೈಂದೂರು: ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ರೈತರ ಗೋಳು ಕೇಳುವವರಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರಿಲ್ಲ. ರೈತ ಸಂಘಟಿತನಾಗಿ ಹೋರಾಟ ನಡೆಸಿದರಷ್ಟೇ ನ್ಯಾಯ ಸಿಗಬಹುದು ಎನ್ನುವ ಆಶಯದೊಂದಿಗೆ ರಾಜ್ಯದಾದ್ಯಂತ ಸಂಘಟನೆ ಬಲಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷೆ ಚನ್ನೆನಹಳ್ಳಿ ನಾಗರತ್ನ ಚನ್ನರಾಯಪಟ್ಣ ಹೇಳಿದರು.
ಅವರು ಭಾನುವಾರ ಬೈಂದೂರು ತಾಲೂಕಿನ ನಾಗೂರು ಯಕ್ಷಿ ಮನೆಯಲ್ಲಿ ನಡೆದ ಬೈಂದೂರು ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಘಟಕದ ಪದಾಧಿಕಾರಿಗಳಿಗೆ ಹಸಿರು ಶಾಲು ನೀಡಿ ಗೌರವಿಸಲಾಯಿತು. ಬಿಲ್ವಪತ್ರೆ ಗಿಡ ನೆಡುವ ಮೂಲಕ ಸಂಘಟನೆ ಮರದಷ್ಟೇ ಬಲಿಷ್ಟವಾಗಲಿ ಎಂದು ಹಾರೈಸಲಾಯಿತು.
ಗೌರವಾಧ್ಯಕ್ಷ ಬಸನಗೌಡ ಪೋಲಿಸ್ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಕೊಟ್ಟಾರಿ, ರಾಜ್ಯ ಉಪಾಧ್ಯಕ್ಷ ಪುರಂದರ ಪೂಜಾರಿ, ಗೋವಿಂದ ಪಾತ್ರಿಗಳು ಯಕ್ಷಿ ಮನೆ ನಾಗೂರು, ರಾಜ್ಯ ಪ್ರಧಾನ ಖಜಾಂಚಿ ಸೋಮಶೇಖರ್, ಹಾಸನ ಘಟಕ ಮುಖಂಡ ಭೂಮೇಶ್ , ಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ನಿತೇಶ್ ಸುವರ್ಣ, ಸ್ಥಳೀಯ ಮುಖಂಡ ಬಾಬು ಆಚಾರ್ಯ ಹೇರೂರು, ನಾಗೇಂದ್ರ ಯಕ್ಷಿಮನೆ ಮೊದಲಾದವರ ಉಪಸ್ಥಿತರಿದ್ದರು.
Kshetra Samachara
11/09/2022 07:09 pm