ಮಂಗಳೂರು: ಇತ್ತೀಚೆಗೆ ಹೆತ್ತವರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಸಂಬಂಧಿಕರು, ನೆರೆಹೊರೆಯವರು, ಸ್ನೇಹಿತರನ್ನೆಲ್ಲಾ ಸೇರಿಸಿ ಸಂಭ್ರಮದಿಂದ ಆಚರಿಸುತ್ತಾರೆ. ಕೇಕ್ ಕಟ್ ಮಾಡಿ, ಭರ್ಜರಿ ಬಾಡೂಟ ನೀಡಿ ಆತಿಥ್ಯ ನೀಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ತಮ್ಮ ಮಗುವಿನ ಮೊದಲ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸೈ ಎನಿಸಿದೆ.
ಹೌದು... ಕಾಸರಗೋಡು ಜಿಲ್ಲೆಯ ಬಾಯಾರು ನಿವಾಸಿಗಳಾದ ವಿನಯ್ ಕುಮಾರ್ - ಅನುಷಾ ದಂಪತಿ ತಮ್ಮ ಪುತ್ರಿ ರಿಯಾಂಶಿ ಬಿ.ಎನ್. ಹುಟ್ಟುಹಬ್ಬವನ್ನು ಪರಿಸರ ಜಾಗೃತಿ ಮೂಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದೆ. ಇವರು ತಮ್ಮ ನಿವಾಸದ ಸುತ್ತಮುತ್ತಲು ಮರವಾಗಿ ಬೆಳೆಯುವ 50 ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಪರಿಸರ ಕಾಳಜಿಯ ಉದ್ದೇಶದಿಂದ ಈ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳು ಬೆಳೆದು ಮರಗಳಾಗಿ ಇದರ ಹಣ್ಣುಗಳು ಪ್ರಾಣಿ - ಪಕ್ಷಿಗಳಿಗೆ ಆಹಾರವೂ ಆಗಬೇಕೆಂಬ ಸದುದ್ದೇಶ ಇದರ ಹಿಂದಿದೆಯಂತೆ.
ಇದಲ್ಲದೆ ದಂಪತಿ ಪರಿಸರದ ನಿವಾಸಿಗಳಿಗೆ 50 ಗಿಡಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಮೂಲಕ ಇತರರಲ್ಲೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನವು ಗಿಡಗಳನ್ನು ನೆಡುವ, ಹಂಚುವ ಕಾರ್ಯಕ್ಕೆ ಸಾಥ್ ನೀಡಿದೆ. ಒಟ್ಟಿನಲ್ಲಿ ಬರ್ತ್ ಡೇ ಆಚರಿಸಿ ದುಂದುವೆಚ್ಚ ಮಾಡುವ ಈ ಕಾಲದಲ್ಲಿ ಪ್ರಕೃತಿಯನ್ನು ಉಳಿಸುತ್ತ ಹೆಜ್ಜೆಯಿಟ್ಟಿರುವ ಈ ದಂಪತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ.
Kshetra Samachara
21/07/2022 10:38 pm