ವರದಿ: ರಹೀಂ ಉಜಿರೆ
ಉಡುಪಿ: ಕರಾವಳಿಯ ಜನಪದ ಆಟ, ಕಂಬಳಕ್ಕೆ ದಿನಗಣನೆ ಶುರುವಾಗಿದೆ. ಮಣ್ಣಿನ ಮಕ್ಕಳು ಭರ್ಜರಿ ತಾಲೀಮು ಆರಂಭಿಸಿದ್ದಾರೆ. ಕೆಸರು ಗದ್ದೆಗೆ ಇಳಿದು ಕೋಣಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ.
ಕರಾವಳಿಯಲ್ಲಿ ಯಾವ ಕ್ರೀಡೆಗೂ ಇಲ್ಲದೇ ಇರೋ ಕ್ರೇಝ್ ಕಂಬಳಕ್ಕಿದೆ.ಕಂಬಳ ಅಂದರೆ ಸರ್ವಧರ್ಮದವರು ಸೇರಿ, ಬಡವ ಶ್ರೀಮಂತ ಎನ್ನದೇ ಸಂಭ್ರಮಿಸುವ ಜನಪದ ಆಟ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ನಡೆಯುವ ಸಾಂಪ್ರದಾಯಿಕ ಹಾಗೂ ಆಧುನಿಕ ಕಂಬಳಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿವೆ.ಈ ಹಿನ್ನೆಲೆಯಲ್ಲಿ ಕೋಣಗಳನ್ನು ನೇರಾವಗಿ ಕಂಬಳ ಗದ್ದೆಗೆ ಇಳಿಸುವ ಬದಲಾಗಿ ಕಂಬಳ ಸೀಝನ್ ಶುರುವಾಗುವ ತಿಂಗಳು ಮೊದಲು ಮನೆಯ ಗದ್ದೆಗಳಲ್ಲಿ ಅಥವಾ ಕಂಬಳ ನಡೆಯುವ ಕರೆಗಳಲ್ಲಿ ತರಬೇತಿ ನೀಡುತ್ತಾರೆ. ಇದನ್ನು ಕುದಿ ಕಂಬಳ ಅಂತಾರೆ. ಕುದಿ ಕಂಬಳದಲ್ಲಿ ಕೋಣಗಳನ್ನು ಓಡಿಸಿ ತಯಾರು ಮಾಡ್ತಾರೆ. ಅದರಂತೆ ಉಡುಪಿ ಜಿಲ್ಲೆಯ ಬೈಂದೂರಿನ ಬೋಳಂಬಳ್ಳಿಯಲ್ಲಿ ಕೋಣಗಳ ಯಜಮಾನ, ಪರಮೇಶ್ವರ ಭಟ್ ಈಗಾಗಲೇ ಮುಂದಿನ ತಿಂಗಳ ಕಂಬಳಕ್ಕಾಗಿ ತಮ್ಮ ಕೋಣಗಳನ್ನು ಕುದಿ ಕಂಬಳದಲ್ಲಿ ಸಜ್ಜು ಮಾಡುತ್ತಿದ್ದಾರೆ.
ಕಂಬಳ ಓಟಗಾರರು ಕೂಡ, ಕಂಬಳ ಕೂಟದ ಓಟಕ್ಕೂ ಮೊದಲು ಕುದಿ ಕಂಬಳದ ಅಭ್ಯಾಸದಲ್ಲಿ ತೊಡಗಿಸಿಕೊಂಡು, ಮುಂದಿನ ಕಂಬಳದ ಓಟ ಸ್ಪರ್ಧೆಗೆ ಸಜ್ಜಾಗುತ್ತಾರೆ. ಮಕ್ಕಳು, ಹಿರಿಯರು ಕೆಸರು ಗದ್ದೆಯಲ್ಲಿ ಕೋಣದ ಓಟ ನೋಡಿ ಸಂಭ್ರಮಿಸುತ್ತಿದ್ದಾರೆ.
ಕೊರೋನಾ ಕಾರಣದಿಂದ ಈ ಬಾರಿಯೂ ಕಳೆದ ಸೀಝನ್‌ನಂತೆ ಕಂಬಳ ಕೂಟ ತಡವಾಗುತ್ತೋ ಎಂಬ ಆತಂಕ ಕಂಬಳಪ್ರಿಯರಲ್ಲಿ ಇತ್ತು. ಆದರೆ ಹಾಗಾಗದೇ ಮುಂದಿನ ತಿಂಗಳು ಆಧುನಿಕ ಕಂಬಳಕ್ಕೆ ದಿನ ನಿಗದಿ ಆಗಿದೆ.ಕಂಬಳಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
Kshetra Samachara
29/10/2021 06:20 pm