ಮೂಡುಬಿದಿರೆ: ಶತಮಾನದ ಸಂಪ್ರದಾಯದಂತೆ ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಶ್ರೀಕೃಷ್ಣ ವೇಷಧಾರಿ ಪೇಟೆಯ ಅಲ್ಲಲ್ಲಿ ಕಟ್ಟಲಾದ ಮೊಸರ ಕುಡಿಕೆಗಳನ್ನು ಕುಣಿದು ಒಡೆಯುವ ಮೂಲಕ ಮಂಗಳವಾರ ಮೊಸರುಕುಡಿಕೆ ಆಚರಣೆ ನಡೆಯಿತು.
ಶ್ರೀಗೋಪಾಲ ಕೃಷ್ಣ ದೇವಳದ ಆಶ್ರಯದಲ್ಲಿ ಸುಮಾರು 104 ವರ್ಷಗಳಿಂದ ಆಚರಣೆಯಲ್ಲಿರುವ ಈ ಸಂಪ್ರದಾಯದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳಲಿ ಚಂದ್ರಶೇಖರ್ ಶ್ರೀಕೃಷ್ಣನಾಗಿ ಪೇಟೆಯಲ್ಲಿ ಕಟ್ಟಿರುವ ಕುಡಿಕೆಗಳನ್ನು ಒಡೆದಿದ್ದಾರೆ.
ಗೋಪಾಲಕೃಷ್ಣ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ತೆಂಕತಿಟ್ಟು ಯಕ್ಷಗಾನ ಶೈಲಿಯ ಕೃಷ್ಣವೇಷಧಾರಿ ದೇವಳದಿಂದ ಹೊರಟು, ಪೇಟೆಯ ರಸ್ತೆಗೆ ಅಡ್ಡಲಾಗಿ ಅಲ್ಲಲ್ಲಿ ತೂಗು ಹಾಕಿರುವ ಮೊಸರ ಕುಡಿಕೆಗಳನ್ನು ಹಿಮ್ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುವುದು ಇಲ್ಲಿನ ವಿಶೇಷ. ಶತಮಾನದ ಈ ಪರಂಪರೆಯಲ್ಲಿ ದಿ. ಮೋನಪ್ಪ ಕುಲಾಲ್ ಮಳಲಿ 37 ವರ್ಷ ಕೃಷ್ಣ ವೇಷಧಾರಿಯಾಗಿ ಕುಡಿಕೆ ಒಡೆದಿದ್ದರು. ಆ ಬಳಿಕ ಅವರ ಮಗ ದಿವಾಕರ್ ಕುಲಾಲ್ 2018ರವರೆಗೆ 27 ವರ್ಷಗಳ ಕಾಲ ಕೃಷ್ಣವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ದಿವಾಕರ್ ಕುಲಾಲ್ ನಿಧನ ನಂತರ ಚಂದ್ರಶೇಖರ್ ಕುಲಾಲ್ ಅವರು ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
Kshetra Samachara
31/08/2021 10:14 pm