ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನ ಕೈಂಕರ್ಯಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1 ಲಕ್ಷ ರೂ. ದಾನ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹ ದೇವರ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತ ಪದ್ಮನಾಭ ಐತಾಳ್ ಹಾಗೂ ಮಯ್ಯ ಟಿಫಿನ್ ಮಾಲೀಕ ರಾಘವೇಂದ್ರ ಮಯ್ಯ ಸಮ್ಮುಖದಲ್ಲಿ ಅಜ್ಜಿ ಅಶ್ವತ್ಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು.
ಕಳೆದ 26 ವರ್ಷಗಳಿಂದ ವಿವಿಧ ಕ್ಷೇತ್ರಗಳಿಗೆ ದಾನ ಮಾಡಿ, ಶಬರಿಮಲೆ ಯಾತ್ರೆ ಕೈಗೊಂಡಿದ್ದು, ಅದರಂತೆ ತಾನು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹೊರರಾಜ್ಯ ಕೇರಳದ ಶ್ರೀ ಅಯ್ಯಪ್ಪನ ಸನ್ನಿಧಾನಕ್ಕೂ ಲಕ್ಷ ರೂ. ನೀಡಿ ಮನೆಮಾತಾಗಿರುವ ಅಶ್ವತ್ಥಮ್ಮ ಇದೀಗ ಈ ಬಾರಿ ಸಾಲಿಗ್ರಾಮ ಕ್ಷೇತ್ರದಿಂದ ಯಾತ್ರೆಗೆ ಹೊರಟಿರುವುದು ವಿಶೇಷವಾಗಿದೆ.
ಅಶ್ವತ್ಥಮ್ಮ ಶಬರಿಮಲೆಗೆ ಹೊರಡುವ ವಿಚಾರ ಗಮನಿಸಿದ ಸ್ಥಳೀಯ ಅಯ್ಯಪ್ಪ ಭಕ್ತಾದಿಗಳು, ಇನ್ನಿತರರು ಅಜ್ಜಿಯ ಪಾದಕ್ಕೆರಗಿ ಆಶೀರ್ವಾದ ಪಡೆದು ಅಜ್ಜಿಯ ಹರಕೆಯಂತೆ ಶ್ರೀ ಕ್ಷೇತ್ರ ಅನ್ನದಾನದಲ್ಲಿ ಪಾಲ್ಗೊಂಡು ಸಂತುಷ್ಟರಾದರು.
ಕಳೆದ ಹಲವು ವರ್ಷಗಳಿಂದ ಶ್ರೀ ದೇವಳದ ಎದುರುಗಡೆ ಭಿಕ್ಷಾಟನೆ ಮಾಡುವ ಅಶ್ವತ್ಥಮ್ಮನಿಗೆ ಭದ್ರತೆಯ ದೃಷ್ಟಿಯಿಂದ ಶ್ರೀ ಕ್ಷೇತ್ರದ ಸ್ಥಳದಲ್ಲಿರಲು ವ್ಯವಸ್ಥೆ ಕಲ್ಪಿಸಲಾಗಿದೆ.
Kshetra Samachara
10/02/2021 03:00 pm