ಮಂಗಳೂರು: ಪೊಲೀಸ್ ವೃತ್ತಿಯೆಂದರೆ ಎಲ್ಲಾ ವೈಯಕ್ತಿಕ ಕೆಲಸ ಬದಿಗೊತ್ತಿ ಕರ್ತವ್ಯವನ್ನೇ ಧ್ಯೇಯವನ್ನಾಗಿ ಪರಿಗಣಿಸಿ ಕಾರ್ಯಕ್ಷಮತೆ ತೋರಿಸಬೇಕಾಗಿರೋದು ಅನಿವಾರ್ಯ. ದಿನದ ಪ್ರತಿ ಹೊತ್ತಿನಲ್ಲಿಯೂ ಇವರು ಕಾರ್ಯಪ್ರವೃತ್ತರಾಗಿಯೇ ಇರಬೇಕು. ಆದರೆ, ಈ ಮಧ್ಯೆಯೇ ಕೆಲವರು ತಮ್ಮೊಳಗಿನ ಪ್ರತಿಭೆ ಒರೆಗೆ ಹಚ್ಚುತ್ತಲೇ ಇರುತ್ತಾರೆ. ಹೌದು, ಮಂಗಳೂರಿನ ಪೊಲೀಸ್ ಸಿಬ್ಬಂದಿಯೊಬ್ಬರು ಹಾಡಿನ ಮೂಲಕ ಎಲ್ಲರನ್ನೂ ಮನರಂಜಿಸುತ್ತಿದ್ದಾರೆ.
ಇವರೇ ನೋಡಿ ಪೊಲೀಸ್ ಸಿಬ್ಬಂದಿ ಸುಬ್ರಾಯ ಕಲ್ಪನೆ. ಕಳೆದ 25 ವರ್ಷಗಳಿಂದ ASI ಆಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಹೆಸರು ಮಾಡಬೇಕೆಂಬ ಆಸಕ್ತಿ ಇವರಿಗೆ. ಗೀತಾ ರಚನೆ, ಸಾಹಿತ್ಯ ಜೊತೆಗೆ ಈಗಾಗಲೇ ಕೆಲವೊಂದು ಹಾಡನ್ನು ಹಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ʼಕಣ್ಣುಗಳೆರಡುʼ ನಾಟಕ, ಅಲ್ಬಮ್ ಸಾಂಗ್ ಹಾಗೂ ಇತ್ತೀಚೆಗೆ ಕೊರೊನಾ ಸಂದರ್ಭ ʼಕಾಣದ ಕೊರೊನಾಗೆ ಎಲ್ಲಿದೆ ಔಷಧಿʼ ಎಂಬ ಹಾಡು ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ಈ ಹಾಡನ್ನು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬಿಡುಗಡೆಗೊಳಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದೆ ಚಲನಚಿತ್ರಗಳಿಗೂ ಹಾಡಬೇಕೆಂಬ ಅಭಿಲಾಷೆ ಸುಬ್ರಾಯ ಅವರದ್ದು.
PublicNext
20/01/2022 09:25 pm