ಕಾಪು: ಕಾಪುವಿನ ಇತಿಹಾಸ ಪ್ರಸಿದ್ಧ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಕಾಪು ಮಜೂರಿನ ಹಳೆ ಸರಕಾರಿ ಕಾಲೇಜಿನ ಆವರಣದಲ್ಲಿ ನೂತನ ಗರ್ಭಗುಡಿಗೆ ಹಾಗೂ ಉಚ್ಚಂಗಿ ಅಮ್ಮನ ಗುಡಿಗೆ ಶಿಲಾ ಮುಹೂರ್ತ ನೆರವೇರಿತು.
ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಜೂರಿನಲ್ಲಿ ಶಿಲಾ ಮುಹೂರ್ತ ಜರುಗಿತು.
ವೇದಮೂರ್ತಿ ಕುಮಾರ ಗುರು ತಂತ್ರಿ ಹಾಗೂ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಶಿಲಾ ಮುಹೂರ್ತದ ಪೂಜಾ ವಿಧಿವಿಧಾನ ಸಂಪನ್ನಗೊಂಡಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯಿಂದ ಕಾಪು ಹೊಸ ಮಾರಿಗುಡಿಯನ್ನು ಸಮಗ್ರ ಜೀರ್ಣೋದ್ಧಾರ ಮಾಡುವುದೆಂದು ನಿಶ್ಚಯಿಸಿದ್ದೇವೆ.
ಈ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಶಿಲಾನ್ಯಾಸ ಹಾಗೂ ಷಡಾಧಾರ ಪ್ರಕ್ರಿಯೆ ಜರಗಿತ್ತು. ಸರಕಾರದ ಅನುಮೋದನೆ ಸಿಗುವಾಗ ವಿಳಂಬ ಆದುದರಿಂದ ಸ್ವಲ್ಪ ತಡವಾಗಿ ಶಿಲಾ ಮುಹೂರ್ತ ನೆರವೇರಿಸುತ್ತಿದ್ದೇವೆ.
ಶ್ರೀ ಮಾರಿಯಮ್ಮನ ಗರ್ಭಗುಡಿ ಹಾಗೂ ಉಚ್ಚಂಗಿ ಅಮ್ಮನ ಗರ್ಭ ಗುಡಿಯ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾರ್ಕಳದ ಖ್ಯಾತ ಗುತ್ತಿಗೆದಾರ ಸುಜಯ ಕುಮಾರ್ ಶೆಟ್ಟಿ ವಹಿಸಿ ಕೊಂಡಿದ್ದು, ಇವತ್ತು ಶಿಲಾ ಮುಹೂರ್ತ ನೆರವೇರಿಸಲಾಗಿದೆ.
ಈ ಎಲ್ಲಾ ಜೀರ್ಣೋದ್ಧಾರ ಪ್ರಕ್ರಿಯೆಗೆ ಕನಿಷ್ಠ 30-35 ಕೋಟಿ ವೆಚ್ಚ ತಗಲಲಿದ್ದು, ಮೊದಲನೇ ಹಂತದಲ್ಲಿ 18 ಕೋಟಿಯ ಕಾಮಗಾರಿ ಪ್ರಾರಂಭವಾಗಲಿದೆ. ಉಳಿದುದ್ದರಲ್ಲಿ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಲಿದ್ದೇವೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಅನಿಲ್ ಬಳ್ಳಾಲ್, ಕಾಪು ರತ್ನಾಕರ ಹೆಗ್ಡೆ, ಬಾಲಾಜಿ ಯೋಗೀಶ್ ಶೆಟ್ಟಿ, ಸುಧಾಮ ಶೆಟ್ಟಿ, ಪುರಸಭಾಧ್ಯಕ್ಷ ಅನಿಲ್ ಕುಮಾರ್, ಕಲ್ಯ ಶ್ರೀಕರ ಶೆಟ್ಟಿ, ವಿಕ್ರಂ ಕಾಪು, ನಡಿಕೆರೆ ರತ್ನಾಕರ ಹೆಗ್ಡೆ, ಕಲ್ಯ ರಮೇಶ ಹೆಗ್ಡೆ, ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಗೋವರ್ಧನ ಶೇರಿಗಾರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/12/2020 04:53 pm