ಬೈಂದೂರು : ದಾಖಲೆ ದುರ್ಬಳಕೆ ಮಾಡಿ ಬೇರೆಯವರ ಆಸ್ತಿ, ಹಣ ಲಪಟಾಯಿಸುವುದನ್ನು ಕೇಳಿದ್ದೇವೆ ನೋಡಿದ್ದೇವೆ. ಆದ್ರೆ ಮೊಮ್ಮಗನೇ ತನ್ನ ಅಜ್ಜಿಯ 25 ಲಕ್ಷ ರೂ ಎತ್ತಿ ಹಾಕಿದ ಘಟನೆ ಬೆಳಕಿಗ ಬಂದಿದೆ.
ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕನೇ ಈ ಗೋಲ್ಮಾಲ್ ರೂವಾರಿ ಎಂಬ ಆರೋಪ ಕೇಳಿ ಬರ್ತಿದೆ. ಈತ ಅಜ್ಜಿ ಹೆಸರಿನ ಜಿಪಿಎ ಯನ್ನೇ ಬಳಸಿಕೊಂಡು ಆಕೆಯ ಮೊಮ್ಮಗನನ್ನು ಪುಸಲಾಯಿಸಿ ಆತನಿಂದ ಸಹಿ ಪಡೆದು 25 ಲಕ್ಷ ಹಣ ಪಡೆದು ಯಾಮಾರಿಸಿದ್ದಾನೆ ಎಂದು ಹೇಳಲಾಗ್ತಾ ಇದೆ.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಈ ಹಿಂದಿನಿಂದಲೂ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರಕರಣ ಹೀಗಿದೆ : ಖಂಬದಕೋಣೆ ನಿವಾಸಿ ಪುಟ್ಟಿ ಪೂಜಾರ್ತಿ ಎಂಬುವರಿಗೆ 1.30 ಎಕ್ರೆ ಜಾಗ ಇದ್ದು, ಅವರ ಮಕ್ಕಳು ವ್ಯವಹಾರಕ್ಕಾಗಿ ಜಿಪಿಎ ಮಾಡಿಕೊಟ್ಟಿದ್ದರು. ಆದ್ರೆ ತುರ್ತು ಕಾರಣಕ್ಕಾಗಿ ಆರು ವರ್ಷಗಳ ಹಿಂದೆ ಮೂರು ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದರು.
ಆದರೆ ಮಿತಿಯ ಕಾರಣವೊಡ್ಡಿ 2 ಲಕ್ಷ ಸಾಲ ನೀಡಿದ್ದರು. ಬಳಿಕ ಸಾಲದ ಕಂತನ್ನು ಕಟ್ಟುತ್ತಾ ಬಂದಿದ್ದರು. ಸಾಲ ಇರುವುದರಿಂದ ಅವರ ದಾಖಲೆ ಪತ್ರಗಳು ಸೊಸೈಟಿಯಲ್ಲಿಯೇ ಇದ್ದವು.
ಎರಡು ವರ್ಷಗಳ ಬಳಿಕ ಸೊಸೈಟಿಯ ನಿರ್ದೇಶಕ ಮೋಹನ ಪೂಜಾರಿ ಹಾಗೂ ಆತನ ಸ್ನೇಹಿತ ದಿನೇಶ ಮೊಗವೀರ ಎಂಬಿಬ್ಬರು ಪುಟ್ಟಿ ಪೂಜಾರ್ತಿಯ ಮೊಮ್ಮಗ ನಾಗರಾಜನನ್ನು ಪುಸಲಾಯಿಸಿ, ದೋಣಿ ಮಾಡುವ, ಬಂದ ಲಾಭವನ್ನು ಹಂಚಿಕೊಳ್ಳುವ, ಸಾಲವನ್ನು ನಾವು ಕಟ್ಟುತ್ತೇವೆ ಎಂದು ನಂಬಿಸಿದ್ದಾರೆ.
ಬಳಿಕ ನಾಗರಾಜನ ಸಹಿ ಹಾಕಿಸಿ 25ಲಕ್ಷ ಹಣವನ್ನು ಮೋಹನ ಪೂಜಾರಿ ಹಾಗೂ ದಿನೇಶ್ ಮೊಗವೀರ ಪಡೆದು ಸಾಲ ಕಟ್ಟದೇ ವಂಚಿಸಿದ್ದಾರೆ. ಮನೆಯ ಮದುವೆ ಕಾರ್ಯಕ್ಕೆ ಸಾಲ ಪಡೆಯಲು ಹೋದಾಗ ಅಜ್ಜಿ ಮನೆಯವರಿಗೆ ವಿಷಯ ಗೊತ್ತಾಗಿದೆ.
ಇದೀಗ ಸಾಲ ಕಟ್ಟದ ಕಾರಣ ಅಜ್ಜಿ ಜಾಗ ಮತ್ತು ಮನೆ ಹರಾಜಿಗೆ ಬಂದಿದೆ. ಸೊಸೈಟಿಯವರು ಮನೆ ಬಾಗಿಲಿಗೆ ಬಂದು ಹಿಂಸೆ ನೀಡುತ್ತಿದ್ದಾರೆ. ಪೊಲೀಸ್ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಜ್ಜಿ ಕುಟುಂಬ ಇದೀಗ ಅಕ್ಷರಶಃ ಬೀದಿಗೆ ಬರುವಂತಾಗಿದೆ.
ಇಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಸೊಸೈಟಿಯವರು ಹೇಗೆ 25 ಲಕ್ಷ ಸಾಲ ನೀಡಿದರು? ಸಾಲ ನೀಡುವ ಮುನ್ನ ಅಜ್ಜಿಯ ಅನುಮತಿಯನ್ನೇಕೆ ಕೇಳಲಿಲ್ಲ? ಅಜ್ಜಿಯ ಸಹಿಯನ್ನು ಪೋರ್ಜರಿ ಮಾಡಿದ್ದು ಯಾರು? ನಿರ್ದೇಶಕನ ಜೊತೆ ಸೊಸೈಟಿ ಅಧಿಕಾರಿಗಳು ಶಾಮೀಲಾಗಿದ್ದಾರಾ? ಎನ್ನುವುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
Kshetra Samachara
30/09/2022 11:26 am