ಸುರತ್ಕಲ್: ಸುರತ್ಕಲ್'ನ "ಭಾರ್ಗವಿ ಫೈನಾನ್ಸ್" ಮಾಲೀಕ ಮತ್ತು ಆತನ ಪತ್ನಿ ಸೇರಿ ಪರಿಸರದ ಜನರಿಗೆ ಕೋಟ್ಯಾಂತರ ರೂಪಾಯಿಗೂ ಅಧಿಕ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದ್ದು, ದೀಪಕ್ ಶೆಟ್ಟಿ ನೀಡಿದ ದೂರಿನಂತೆ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಸುರತ್ಕಲ್ ನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್, ಪತ್ನಿ ವಿದ್ಯಾವತಿ ಭಟ್, ಮಗಳು ಪ್ರಿಯಾಂಕಾ ಭಟ್ ಗುರುತಿಸಲಾಗಿದ್ದು, ಸೆನ್ ಅಪರಾಧ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಭಾರ್ಗವಿ ಫೈನಾನ್ಸ್ ನಲ್ಲಿ ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ರೂಾಯಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಪರಿಸರದ ಹೋಟೆಲ್, ಅಂಗಡಿ ಮಾಲೀಕರು, ಉದ್ಯಮಿಗಳು, ವ್ಯಾಪಾರಿಗಳು ತಾವು ದುಡಿದ ಲಕ್ಷಾಂತರ ರೂ. ಹಣವನ್ನು ಕಟ್ಟುತ್ತಾ ಬಂದಿದ್ದರು. ಪ್ರತಿ ಬಾರಿಯೂ ಫಂಡ್ ಹಣವನ್ನು ಕೊನೆಗೆ ತೆಗೆಯಿರಿ ಎನ್ನುತ್ತಿದ್ದ ಆರೋಪಿಗಳು ಹಣವನ್ನು ಚೆಕ್ ಮುಖಾಂತರ ಸ್ವೀಕರಿಸದೆ ನಗದು ಮೂಲಕವೇ ಸ್ವೀಕರಿಸುತ್ತ ಬಂದಿದ್ದು ವಂಚನೆಗೆ ಮೊದಲೇ ನಿರ್ಧರಿಸಿದ್ದರು ಎಂದು ಸಂತ್ರಸ್ತರು ದೂರಿದ್ದಾರೆ.
ಅಶೋಕ್ ಭಟ್ ಎಂಟು ತಿಂಗಳ ಹಿಂದೆ ಸುರತ್ಕಲ್ ನಲ್ಲಿನ ಫೈನಾನ್ಸ್ ಮುಚ್ಚಿದ್ದು ಕಟೀಲು ಬಳಿ ಹೊಸದಾಗಿ ಫೈನಾನ್ಸ್ ತೆರೆದಿದ್ದಾನೆ. ಕಟೀಲು, ಕಿನ್ನಿಗೋಳಿ ಭಾಗದಲ್ಲೂ ಇದೇ ರೀತಿ ಹಲವರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಈ ಕುರಿತು ಇನ್ನಷ್ಟೇ ದೂರು ದಾಖಲಾಗಬೇಕಿದೆ.
ಅಶೋಕ್ ಭಟ್ ಸುರತ್ಕಲ್ ಭಾಗದಲ್ಲಿ ನೂರಾರು ಮಂದಿಗೆ 2500 ರೂ. ನಿಂದ ಹಿಡಿದು 70 ಲಕ್ಷದವರೆಗೆ ಪಂಗನಾಮ ಹಾಕಿದ್ದಾನೆ. ಪ್ರತಿ ಬಾರಿ ಯಾವುದೇ ದಾಖಲೆ ಉಳಿಯದಂತೆ ಎಚ್ಚರಿಕೆ ವಹಿಸಿದ್ದು ಪತ್ನಿ, ಮಗಳನ್ನು ಮುಂದಿಟ್ಟು ಗೋಲ್ ಮಾಲ್ ನಡೆಸುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ.
ಫಂಡ್ ಅವಧಿ ಮುಗಿಯುತ್ತ ಬಂದರೂ ಹಣ ಕೊಡದಿರುವುದನ್ನು ಪ್ರಶ್ನಿಸಿದಾಗ ಫೈನಾನ್ಸ್ ಹಣ ಕಲೆಕ್ಷನ್ ಮಾಡುತ್ತಿದ್ದ ಶಿಬರೂರು ನಿವಾಸಿ ಯಕ್ಷತ್ ಎಂಬಾತನ ಹೆಸರನ್ನು ಹೇಳುತ್ತಾ ಆತ ಹಣ ಕೊಡದೆ ವಂಚಿಸಿದ್ದಾಗಿ ಸುಳ್ಳು ಹೇಳುತ್ತಿದ್ದ. ಹೀಗೆ ವರ್ಷಗಳ ಕಾಲ ಯಾಮಾರಿಸುತ್ತ ಬಂದಿದ್ದು ಅಂತಿಮವಾಗಿ ಹಣ ಕಟ್ಟಿದವರು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Kshetra Samachara
28/09/2022 09:34 am