ವರದಿ: ರಹೀಂ ಉಜಿರೆ
ಕುಂದಾಪುರ: ಉಡುಪಿ ಜಿಲ್ಲೆಯ ಯಡಮೊಗೆಯ ಬಿಜೆಪಿ ಕಾರ್ಯಕರ್ತ ಉದಯ ಗಾಣಿಗ ಕೊಲೆಯಾಗಿ ಒಂದು ವರ್ಷ ಸಂದರೂ ಕುಟುಂಬದವರಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಸ್ಥಳೀಯ ಶಾಸಕರು ಕೊಟ್ಟ ಆಶ್ವಾಸನೆ ಇನ್ನೂ ಈಡೇರಿಲ್ಲ. ಕೊಲೆಗೀಡಾದ ಉದಯ ಪತ್ನಿ ಮಕ್ಕಳಿಗೆ ಇದುವರೆಗೆ ಬಿಡಿಗಾಸೂ ಸಿಕ್ಕಿಲ್ಲ!
2021ರ ಜೂನ್ 5ರಂದು ಹೊಸಬಾಳು ಸಮೀಪ ಉದಯ ಗಾಣಿಗ ಅವರ ಕೊಲೆಯಾಗಿ ಹೋಗಿತ್ತು. ಉದಯ ಗಾಣಿಗ ಬಿಜೆಪಿ ಕಾರ್ಯಕರ್ತರೂ ಹೌದು. ಸ್ಥಳೀಯ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಎಂಬಾತನೇ ಉದಯ ಗಾಣಿಗ ಅವರನ್ನು ಕೊಲೆ ಮಾಡಿದ್ದಾನೆ ಎನ್ನುವ ಸುದ್ದಿ ಇಡೀ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿತ್ತು. ಈ ಕೊಲೆಯಿಂದಾಗಿ ಉದಯ ಗಾಣಿಗ ಕುಟುಂಬ ಅಕ್ಷರಶಃ ನಲುಗಿ ಹೋಗಿತ್ತು. ಕೊಲೆಯಾದವರು ಹಾಗೂ ಕೊಲೆ ಮಾಡಿದವರು ಬಿಜೆಪಿ ಪಕ್ಷದವರೇ ಆದ ಕಾರಣ ಇದು ರಾಜ್ಯಮಟ್ಟದಲ್ಲೇ ದೊಡ್ಡ ಸುದ್ದಿಯಾಗಿತ್ತು.
ಉದಯ ಗಾಣಿಗ ಅವರ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಸಹಿತ ಹಲವರನ್ನು ಬಂಧಿಸಲಾಯಿತು. ಆರೋಪಿಗಳು ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೊಂದು ರಾಜಕೀಯ ವೈಷಮ್ಯಕ್ಕಾಗಿ ನಡೆದ ಕೊಲೆ ಎಂದು ಸಾಬೀತಾಗಿತ್ತು. ಬಳಿಕ ಸರ್ಕಾರ ಐದು ಲಕ್ಷ ಕೊಡುವುದಾಗಿ ಘೋಷಣೆ ಮಾಡಿತ್ತು. ಅದಿನ್ನೂ ಕುಟುಂಬದ ಕೈಸೇರಿಲ್ಲ. ಇನ್ನು ಬಿಜೆಪಿ ಕಾರ್ಯಕರ್ತ ಎಂಬ ನೆಲೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಒಂದು ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿ ಹೋದವರು ಇತ್ತ ಕಡೆ ತಲೆ ಹಾಕಲೇ ಇಲ್ಲ! ಬಳಿಕ ಉದಯ್ ಗಾಣಿಗ ಕೊಲೆ ಬೇರೆ ಬೇರೆ ರಾಜಕೀಯ ತಿರುವುಗಳನ್ನು ಕೂಡ ಪಡೆದುಕೊಂಡಿತು. ಸದ್ಯ ಕೊಲೆಯಾಗಿ ಒಂದು ವರ್ಷ ಸಂದರೂ ಯಾವುದೇ ಪರಿಹಾರ ಸಿಗದೇ ಉದಯ್ ಗಾಣಿಗ ಪತ್ನಿ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.
ಒಟ್ಟಾರೆ ಈಗ ಪತ್ನಿ ಕೋರ್ಟ್ ಕೇಸ್ ಎಂದು ಓಡಾಡುತ್ತಾ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾದರೂ ಯಾವುದೇ ಪರಿಹಾರ ದೊರಕಿಸಿಕೊಡದ ಪಕ್ಷದ ವಿರುದ್ಧ ಆಕ್ರೋಶ ಕೇಳಿ ಬಂದಿದೆ.ಮಾತ್ರವಲ್ಲ ಈ ಸಂಬಂಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಸ್ಥಳೀಯರು ನೀಡಿದ್ದಾರೆ.
PublicNext
01/07/2022 08:02 pm