ಉಳ್ಳಾಲ: ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಪ್ರಕರಣದಲ್ಲಿ ಸಿಬಿಐ ದಾಳಿಗಿಡಾಗಿ ಬಂಧನಕ್ಕೊಳಗಾಗಿದ್ದ ಮಂಗಳೂರು ಸೆಂಟ್ರಲ್ ರೈಲ್ವೇ ಹಾಸ್ಪಿಟಲ್ ಫಾರ್ಮಸಿಸ್ಟ್ ವಿಜಯನ್ ವಿ.ಎ. ಎಂಬವರು ತೊಕ್ಕೊಟ್ಟಿನ ರೈಲ್ವೇ ಹಳಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮಂಗಳೂರು ಕೇಂದ್ರವಾಗಿಟ್ಟು ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಭೇದಿಸಿದ್ದರು. ಕಳೆದ ವಾರ ಸದ್ದಿಲ್ಲದೆ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ವೈದ್ಯಕೀಯ ಅಧೀಕ್ಷಕ ಸೇರಿ ಮೂವರನ್ನು ಬಂಧಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಫಾರ್ಮಸಿಸ್ಟ್ ವಿಜಯನ್ ವಿ.ಎ. ಮತ್ತು ಇವರಿಗೆ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ಇಬ್ರಾಹಿಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣದಲ್ಲಿ ಸಿಬಿಐ ವಶವಾಗಿದ್ದ ಪ್ರಮುಖ ಆರೋಪಿ ವಿಜಯನ್ ವಿ.ಎ ಅವರು ಇಂದು ಮಧ್ಯಾಹ್ನ ತೊಕ್ಕೊಟ್ಟು ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಜಯನ್ ಅವರ ಮೃತದೇಹವು ಛಿದ್ರಗೊಂಡಿಲ್ಲ. ಆತ್ಮಹತ್ಯೆ ಯತ್ನಕ್ಕೊಳಪಟ್ಟು ರೈಲು ತಾಗಿ ದೂರಕ್ಕೆ ತಳ್ಳಲ್ಪಟ್ಟಿದ್ದಾರೋ ಅಥವಾ ಯಾರೋ ಕೊಲೆ ಮಾಡುವ ಉದ್ದೇಶದಿಂದ ರೈಲಿನಿಂದ ತಳ್ಳಿದ್ದಾರೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಮೃತರ ಜೇಬಿನಲ್ಲಿ 500 ರೂ. ಮೌಲ್ಯದ ಕಂತೆ ನೋಟುಗಳಿದ್ದು ಹೇಗೆ ಸಾವು ಸಂಭವಿಸಿದೆ ಎಂಬ ಬಗ್ಗೆ ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
20/06/2022 07:29 pm