ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮಹಮ್ಮದ್ ರಮೀಝ್(24), ಶಿರಿಯಾ, ಕುನ್ನಿಲ್ ಶಿರಿಯಾ ನಿವಾಸಿ ಮೊಹಿದ್ದೀನ್ ರಾಶೀದ್(24), ಉಪ್ಪಳದ ಮುಳಿಂಜ ನಿವಾಸಿ ಅಬ್ದುಲ್ ರವೂಫ್(35) ಹಾಗೂ ಬೆಂಗಳೂರಿನ ಮಡಿವಾಳ ನಿವಾಸಿ ಸಬಿತಾ ಅಲಿಯಾಸ್ ಚಿಂಚು ಅಲಿಯಾಸ್ ಸಮೀರಾ(25) ಬಂಧಿತ ಆರೋಪಿಗಳು. ಎಂಡಿಎಂಎ ಮಾದಕ ವಸ್ತುವನ್ನು ಬೆಂಗಳೂರಿನಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ಪ್ರದೀಪ್ ಟಿ.ಆರ್. ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ಪಡೀಲ್ ಬಳಿ ಕಾರು ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ ಎಂಡಿಎಂಎ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿದೆ.
ಬಂಧಿತರಿಂದ ಒಟ್ಟು 125 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ 6 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪಕ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ರಿಡ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಸೊತ್ತಿನ ಮೌಲ್ಯ 9,82,000 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Kshetra Samachara
15/06/2022 10:07 pm