ಉಳ್ಳಾಲ: ಪತಿಯೋರ್ವ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಸಿಕ್ಕಿಬಿದ್ದ ಘಟನೆ ಕುಂಪಲದ ಚೇತನ ನಗರದಲ್ಲಿ ನಡೆದಿದೆ.
ಜೋಸೆಫ್ ಫ್ರಾನ್ಸಿಸ್ (54) ಕೊಲೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ನಿವಾಸಿ ಜೋಸೆಫ್ ಎಂಬುವರ ಪುತ್ರಿ ಶೈಮಾ(44) ಎಂಬಾಕೆಯನ್ನು ಜೋಸೆಫ್ ಫ್ರಾನ್ಸಿಸ್‌ಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ, ಚೇತನ ನಗರ ಎಂಬಲ್ಲಿ ವಾಸವಾಗಿದ್ದರು. ಮೇ 11ರ ಬುಧವಾರ ಸಂಜೆ ಕ್ಷುಲ್ಲಕ ವಿಚಾರವೊಂದಕ್ಕೆ ಪತಿ, ಪತ್ನಿಯರ ನಡುವೆ ಜಗಳ ನಡೆದಿದೆ. ಈ ಸಂದರ್ಭ ಜೋಸೆಫ್
ಫ್ರಾನ್ಸಿಸ್ ತನ್ನ ಪತ್ನಿ ಶೈಮಾಳಿಗೆ ಮನೆಯೊಳಗಿನ ಕೋಣೆಯಲ್ಲಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಶೈಮಾಲಿಗೆ ಜೋಸೆಫ್ ವಿಷವನ್ನು ಕುಡಿಸಿದ್ದನಂತೆ. ತಕ್ಷಣ ಶೈಮಾಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದೇ ದಿನ ರಾತ್ರಿ ಅವರು ಮೃತಪಟ್ಟಿದ್ದರು.
ಈ ಬಗ್ಗೆ ಅನುಮಾನಗೊಂಡ ಶೈಮಾ ಅವರ ತಂದೆ ಕೊಚ್ಚಿ ನಿವಾಸಿ ಜೋಸೆಫ್ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಆರೋಪಿ ಜೋಸೆಫ್ ಆಕೆ ವಿಷ ಕುಡಿದು ಗಂಭೀರ ಸ್ಥಿತಿಯಲ್ಲಿದ್ದಳು ಎಂದು ಬಿಂಬಿಸಿದರೂ ಸಾವಿನ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಗಿತ್ತು. ಶನಿವಾರ ಶವ ಮಹಜರು ಪರೀಕ್ಷೆಯ ವರದಿ ಬಂದಿದ್ದು, ಇದರಿಂದ ಕೊಲೆ ಕೃತ್ಯ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ತನಿಖೆಗೆ ಉಳ್ಳಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜೋಸೆಫ್, ಶೈಮಾ ದಂಪತಿಯ ಇಬ್ಬರು ಪುತ್ರರು ವ್ಯಾಸಂಗ ನಡೆಸುತ್ತಿದ್ದು, ಕೊಲೆ ನಡೆದ ವೇಳೆ ಮನೆಯಲ್ಲೇ ಇದ್ದರಂತೆ. ತಂದೆಯನ್ನು ರಕ್ಷಿಸಲಿಕ್ಕಾಗಿ ಪೊಲೀಸರಲ್ಲಿ ಮಕ್ಕಳು ಸತ್ಯ ಮರೆಮಾಚಿದ್ದರೆಂದು ತಿಳಿದು ಬಂದಿದೆ. ತಂದೆ, ತಾಯಿಯ ಜಗಳದಲ್ಲಿ ಈಗ ಇಬ್ಬರು ಗಂಡು ಮಕ್ಕಳು ಅನಾಥರಾಗಿದ್ದಾರೆ.
Kshetra Samachara
15/05/2022 07:59 pm