ಮಂಗಳೂರು: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೆ ಮಾದಕದ್ರವ್ಯ ನೀಡಿ ಆಕೆಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಹಣ ಸುಲಿಗೆಗೈದು ವಂಚಿಸಿರುವ ಕಾಮುಕನನ್ನು ಮಂಗಳೂರು ಸಿಸಿಬಿ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ಉಳ್ಳಾಲದ ಪೆರ್ಮನ್ನೂರು ಹಿದಾಯತ್ ನಗರ ನಿವಾಸಿ ಶಾನವಾಝ್(36) ಬಂಧಿತ ಆರೋಪಿ. ಮೂಡಬಿದಿರೆಯ ಯುವತಿಯೊಬ್ಬಳಿಗೆ ಕಾಮುಕ ಶಾನವಾಝ್ ನ ಪರಿಚಯವಾಗಿದೆ. ಆತನ ಬಣ್ಣದ ಮಾತನ್ನು ನಂಬಿ ತನ್ನ ಸರ್ವಸ್ವವನ್ನೂ ಆಕೆ ಧಾರೆಯೆರೆದಿದ್ದಾಳೆ. ಆದರೆ ಕಾಮುಕ ಶಾನವಾಝ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ವಿವಿಧೆಡೆಗಳಲ್ಲಿ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಮಾದಕ ದ್ರವ್ಯವನ್ನು ಬಲವಂತವಾಗಿ ತಿನ್ನಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಹಣವನ್ನು ನೀಡಬೇಕೆಂದು ಬೆದರಿಕೆಯೊಡ್ಡಿದ್ದಾನೆ. ಈ ಮೂಲಕ ಆಕೆಯಿಂದ 1.50ಲಕ್ಷ ರೂ. ಸುಲಿಗೆ ಮಾಡಿದ್ದನು.
ಆಕೆಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ ಬಳಿಕವೇ ಈತನ ದುಷ್ಕೃತ್ಯ ತಿಳಿದಿದ್ದು. ತಕ್ಷಣ ಆಕೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಳ್ಳುವಂತೆ ಮಂಗಳೂರು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಹೆಚ್ಚಿನ ತನಿಖೆಗೆ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ನೊಂದ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದೆ.
Kshetra Samachara
13/05/2022 09:28 pm