ವಿಟ್ಲ: ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನದ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಯುವಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(15) ಎಂಬಾಕೆ ಕಣಿಯೂರು ಎಂಬಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು.
ಈಕೆ ತನ್ನ ಕುಟುಂಬದೊಂದಿಗೆ ಕನ್ಯಾನ ಗ್ರಾಮದ ಕಣಿಯೂರು ದಿ. ಸುಲೈಮಾನ್ ಹಾಜಿ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ಮನೆಮಂದಿ ಕೆಲಸಕ್ಕೆ ಹೋದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಗೆ ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತ ನಿರಂತರ ಕಿರುಕುಳ ನೀಡಿದ ಆರೋಪದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ:
ಆತ್ಮೀಕಾ ಕಣಿಯೂರು ತಲೆಕ್ಕಿ ಎಂಬಲ್ಲಿಯ ಸಾಹುಲ್ ಹಮೀದ್ ಯಾನೆ ಕುಟ್ಟ ಎಂಬಾತನನ್ನು ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೆ ಗೊತ್ತಾಗಿದೆ.
ಬಳಿಕ ಮಗಳ ಮೊಬೈಲ್ ನ್ನು ತೆಗೆದಿರಿಸಿ ಆಕೆಗೆ ಬುದ್ಧಿವಾದ ಹೇಳಿದ್ದು ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಸಾಹುಲ್ ಹಮೀದ್ ಪದೇ ಪದೇ ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯ ಆಕೆಯ ಮನೆಗೆ ಬಂದು ಆಕೆಯನ್ನು ಭೇಟಿಯಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಅಲ್ಲದೇ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ. ನೀನು ಬರುವುದಿಲ್ಲವಾದರೆ ಸಾಯಿ ಎಂದು ಸಾಹುಲ್ ಹಮೀದ ಯಾನೆ ಕುಟ್ಟ ಹೇಳಿರುವುದನ್ನು ಮಗಳು ಆತ್ಮಿಕಾ ತಂದೆ ಹಾಗೂ ತಾಯಿ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನ ಮಾತಿನಿಂದ ಮನನೊಂದು ಈ ಕೃತ್ಯ ಎಸೆಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
04/05/2022 08:17 pm