ಉಡುಪಿ: ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಉಡುಪಿ ಶಾಖೆಯಲ್ಲಿ ನಡೆದ 1.25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಸಂಘದ ಅಧ್ಯಕ್ಷ ಲೋಕೇಶ್ ಮತ್ತು ನಿರ್ದೇಶಕ ದಿಲೀಪ್ ಸುಪ್ಪೆಕಾರ್ ಬಂಧಿತರು.
ಆರೋಪಿಗಳು ಮೈಸೂರಿನ ಆವಿಷ್ಕಾರ್ ಜೀವನ್ ವಿವಿದ್ದೋದ್ದೇಶ ಸಹಕಾರ ಸಂಘದ ಶಾಖೆಯನ್ನು ಉಡುಪಿಯಲ್ಲಿ ತೆರೆದಿದ್ದು, ಸಂಘದಲ್ಲಿ ಶೇರು ಬಂಡವಾಳ ಮತ್ತು ಠೇವಣಿದಾರರಿಂದ ನಿರಖು ಮತ್ತು ಆರ್.ಡಿ ಮೂಲಕ 3 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದರು. ಬಳಿಕ ಅವ್ಯವಹಾರದ ಬಗ್ಗೆ ಮಾಹಿತಿ ತಿಳಿದ ಠೇವಣಿದಾರರು ಹಣವನ್ನು ಹಿಂಪಡೆದಿದ್ದರು. ಆದರೂ ಕೆಲವೊಂದು ಕಾರಣ ನೀಡಿ ಶೇರು ಬಂಡವಾಳ ಮತ್ತು ನಿರಖು ಠೇವಣಿ ಗಳನ್ನು ಗ್ರಾಹಕರಿಗೆ ನೀಡದೆ ವಂಚಿಸಿದ್ದರು.ಬಳಿಕ ಉಡುಪಿ ಶಾಖೆಯನ್ನು ಮುಚ್ಚಿದ್ದರು ಎನ್ನಲಾಗಿದೆ.
ಈ ವಂಚನೆ ಬಗ್ಗೆ ಹೂಡಿಕೆದಾರರಾದ ಬ್ರಹ್ಮಾವರದ ಅನಂತ ನಾಯಕ್ ಅವರು ಉಡುಪಿ ನಗರ ಠಾಣೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್ ಸಹಿತ 17 ಮಂದಿ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದರು.
Kshetra Samachara
30/04/2022 09:40 am