ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾದ ಸುಳ್ಯ ತಾಲೂಕಿನ ಸಂಪಾಜೆ ಬಳಿ ಹತ್ತು ದಿನಗಳ ಹಿಂದೆ ರಾತ್ರಿ ವೇಳೆ ಮನೆಯೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅಲ್ಲಿದವರನ್ನು ಬೆದರಿಸಿ ಚಿನ್ನ ಹಾಗೂ ನಗದನ್ನು ದೋಚಿದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಜ್ಯೋತಿಷ್ಯ ಹಾಗೂ ಪೌರೋಹಿತ್ಯ ವೃತ್ತಿ ಮಾಡುವ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿ ಅಂಬರೀಶ್ ಎಂಬವರ ಮನೆಗೆ ಮಾ.21 ರಂದು ರಾತ್ರಿ ಮಾರಕಾಯುದ್ದಗಳೊಂದಿಗೆ ಮುಸುಕುಧಾರಿ ದರೋಡೆಕೋರರ ತಂಡ ನುಗ್ಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ 4 ಮಂದಿ ದರೋಡೆಕೋರರನ್ನು ಬಂಧಿಸಿದ ಸುಳ್ಯ ಪೊಲೀಸರ ತಂಡ ಆರೋಪಿಗಳ ಬಳಿಯಿಂದ 20 ಸಾವಿರ ರೂಪಾಯಿ ನಗದು ಹಾಗು ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ತಮಿಳುನಾಡು ರಾಜ್ಯದವರಾಗಿದ್ದು, ಇನ್ನಿಬ್ಬರು ಕರ್ನಾಟಕದ ಹಾಸನ ಜಿಲ್ಲೆಗೆ ಸೇರಿದವರು.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣೂರು ತಾಲೂಕಿನ .ಕಾರ್ತಿಕ್ ಟಿ. ಪ್ರಾಯ: (38 ವರ್ಷ ), ಹಾಸನದ ಚಿಕ್ಕಬುವನಹಳ್ಳಿ ಹೋಬಳಿಯ ಮಧುಕುಮಾರ್ (33 ವರ್ಷ,) ಹಾಸನದ ವಿದ್ಯಾನಗರ ನಿವಾಸಿ ದೀಕ್ಷಿತ್ ಕೆ.ಎನ್ (26 ವರ್ಷ) ಹಾಗೂ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಬಿ. ನರಸಿಂಹನ್, ಪ್ರಾಯ: 40 ವರ್ಷ ಬಂಧಿತರು.
ದರೋಡೆ ವೇಳೆ ಗೋಡ್ರೇಜ್ನಲ್ಲಿದ್ದ 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 1.80 ಲಕ್ಷ ರೂ.ನಗದು, ಒಂದು ಸ್ಯಾಮ್ಸಂಗ್ ಮೊಬೈಲ್ ಅನ್ನು ಕಳ್ಳರು ದೋಚಿದ್ದರು.
ಬಂಧಿತರಿಂದ ದರೋಡೆಗೈದ ನಗದಿನ ಪೈಕಿ ರೂಪಾಯಿ 20000 ಮತ್ತು ಆರೋಪಿಗಳು ಕೃತ್ಯದ ಸಮಯ ಉಪಯೋಗಿಸಿದ ವಾಹನ ಮತ್ತು 5 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಉಳಿದ ಆರೋಪಿಗಳ ಪತ್ತೆ ಮತ್ತು ದರೋಡೆಯಾದ ಚಿನ್ನಾಭರಣಗಳು ಮತ್ತು ಉಳಿದ ನಗದು ಪತ್ತೆಗೆ ಬಾಕಿ ಇರುತ್ತದೆ ಎಂದು ದ.ಕ. ಎಸ್ ಪಿ ಸೋನಾವನೆ ಋಷಿಕೇಶ ಭಗವಾನ್ ಮಾಹಿತಿ ನೀಡಿದ್ದಾರೆ.
Kshetra Samachara
31/03/2022 04:50 pm