ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಕಾರು ಪಾರ್ಕ್ ಬಳಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಕಿನ್ನಿಗೋಳಿ ಸಮೀಪದ ಉಲ್ಲಂಜೆ ಜುಮಾದಿ ಗುಡ್ಡೆ ನಿವಾಸಿ ಹರೀಶ್ ಸಾಲ್ಯಾನ್ (47) ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ನಿವಾಸಿ, ಹಳೆಯಂಗಡಿ ಬಳಿಯ ತೋಕೂರಿನಲ್ಲಿ ವಾಸ್ತವ್ಯವಿರುವ ಮುರುಗನ್(46) ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿ ಇಂದು ಸಂಜೆ ಕೋರ್ಟ್ ಗೆ ಹಾಜರುಪಡಿಸಿದರು.
ಹರೀಶ್ ಸಾಲ್ಯಾನ್, ಮುರುಗನ್ ಸಹಿತ ಇನ್ನೋರ್ವ ಕೂಲಿ ಕಾರ್ಮಿಕ ಕಿನ್ನಿಗೋಳಿಯಿಂದ ಶನಿವಾರ ಸಂಜೆ ಬಸ್ಸಿನಲ್ಲಿ ಮುಲ್ಕಿ ಕಡೆಗೆ ಬಂದಿದ್ದಾರೆ. ಈ ಸಂದರ್ಭ ಕೂಲಿ ಕಾರ್ಮಿಕ ಕೆರೆಕಾಡಿನಲ್ಲಿ ಬಸ್ಸಿನಿಂದ ಇಳಿದಿದ್ದಾನೆ. ಹರೀಶ್ ಹಾಗೂ ಮುರುಗನ್ ಮುಲ್ಕಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಕೂಲಿ ಹಣ 3,500 ರೂ. ವಿಷಯದಲ್ಲಿ ಜಗಳಕ್ಕಿಳಿದಿದ್ದರು.
ಬಳಿಕ ಹರೀಶ್, ಬಪ್ಪನಾಡು ದೇವಸ್ಥಾನಕ್ಕೆ ಹೋಗಿ ಬಂದು ಇಬ್ಬರೂ ಜತೆಯಾಗಿ ಬಾರ್ ಗೆ ಹೋಗಿ ಮದ್ಯ ಸೇವಿಸಿ ಕಾರ್ ಪಾರ್ಕ್ ಬಳಿ ಪುನಃ ಜಗಳ ಮಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿ ಮುರುಗನ್, ಹರೀಶ್ ಸಾಲ್ಯಾನ್ ರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ. ಇವರಿಬ್ಬರ ಜಗಳದ ದೃಶ್ಯ ಮುಲ್ಕಿ ಬಸ್ ನಿಲ್ದಾಣ ಬಳಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಮುರುಗನ್ ನನ್ನು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
Kshetra Samachara
21/03/2022 08:45 pm