ಬಂಟ್ವಾಳ: ಬಂಟ್ವಾಳದ ಬಿ.ಸಿ ರೋಡಿನ ಮಿತ್ತಬೈಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವ ಮಸೀದಿಗೆ ಅಕ್ರಮ ಪ್ರವೇಶ ಮಾಡಿ ಗುರುಗಳನ್ನು ಹತ್ಯೆ ಮಾಡಲು ಆಗಮಿಸಿರುವ ಶಂಕೆಯ ದೂರಿನ ಹಿನ್ನೆಲೆಯಲ್ಲಿ ಬಾಬು ಪೂಜಾರಿ (60) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಸೀದಿಗೆ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಬಂದು ವಠಾರದಲ್ಲಿ ವಾಹನವನ್ನು ಇಟ್ಟು ಪ್ರವೇಶಿಸಿದ್ದು, ಆತನನ್ನು ವಿಚಾರಿಸಿದಾಗ ನಾನು ಮಸೀದಿ ಗುರುಗಳ ಹತ್ಯೆ ಮಾಡಲು ಬಂದಿದ್ದು, ಹತ್ಯೆ ಮಾಡುತ್ತೇನೆ ನನ್ನನ್ನು ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿರುತ್ತಾನೆ. ಅವನ ದ್ವಿಚಕ್ರ ವಾಹನವನ್ನು ಪರೀಶೀಲಿಸಿದಾಗ ಅದರಲ್ಲಿ ಚಾಕು ಸಿಕ್ಕಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೂಡಲೇ ಬಂಟ್ವಾಳ ನಗರ ಠಾಣೆಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಪೊಲೀಸರು ಬಂದಿದ್ದು ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಯನ್ನು ಪೊಲೀಸ ವಶಕ್ಕೆ ನೀಡಲಾಗಿದೆ. ಈತನನ್ನು ಕೂಲಂಕಷವಾಗಿ ವಿಚಾರಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಮಸೀದಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿ ಮಸೀದಿ ವತಿಯಿಂದ ಮನವಿಯನ್ನೂ ಮಾಡಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
02/03/2022 09:41 am