ಕಡಬ: ಕಡಬದ ಕೋಡಿಂಬಾಳ ಬಳ್ಳಿಕಜೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ತನ್ನ ಅಜ್ಜಿ ಮತ್ತು ತನಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಲಾಗಿದ್ದು, ನ್ಯಾಯ ದೊರಕಿಸುವಂತೆ ಎಸ್ಪಿ ಅವರಿಗೆ ಯುವತಿ ದೂರು ನೀಡಿದ್ದಾರೆ. ತುಳುನಾಡು ರಕ್ಷಣಾ ವೇದಿಕೆ ಮೂಲಕ ದೂರು ನೀಡಿದ್ದು, ಸಂತ್ರಸ್ತ ಯುವತಿಯ ಮಾವ- ಅತ್ತೆ, ಮಾವನ ಮಗನ ವಿರುದ್ಧ ಆರೋಪ ಮಾಡಲಾಗಿದೆ.
ದೂರಿನ ಸಾರಾಂಶ: ನನ್ನ ಅಜ್ಜಿಗೆ 2 ಎಕರೆ 70 ಸೆಂಟ್ಸ್ ಜಾಗವಿದ್ದು, ನನ್ನ ಮೂವರು ಮಾವಂದಿರಿಗೆ ಹಾಗೂ ತನಗೂ ಪಾಲು ಮಾಡಿರುತ್ತಾರೆ. ನನ್ನ ಪಾಲಿನ ಜಾಗ ಅಜ್ಜಿ ಹೆಸರಿನಲ್ಲಿದೆ. ಮೊಮ್ಮಗಳಿಗೆ ಪಾಲು ಕೊಟ್ಟಿರುವುದಕ್ಕೆ ಮಾವ ಜಾನ್ಸನ್, ಅತ್ತೆ ಜೆನ್ಸಿ ತಕರಾರು ಮಾಡಿದ್ದಾರೆ. ಅಲ್ಲದೆ, ನನ್ನ ಅಜ್ಜಿಯ ಕುತ್ತಿಗೆ ಹಿಡಿದು ಹಲ್ಲೆಗೈದಿದ್ದಾರೆ.
02-01-2022 ರಂದು ಮಧ್ಯಾಹ್ನ ಮಾವ ಜಾನ್ಸನ್, ಅತ್ತೆ ಜೆನ್ಸಿ, ಅವರ ಮಗ ಸ್ಲೇವಿನ್ ನನ್ನನ್ನು ಅಡ್ಡಗಟ್ಟಿ ಅವಾಚ್ಯ ಪದದಿಂದ ನಿಂದಿಸಿ, ನಿನ್ನನ್ನು ಹಾಗೂ ನಿನ್ನ ಅಜ್ಜಿಯನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಮತ್ತೆ ನಾನು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಆದರೆ, ಮಹಿಳಾ ಠಾಣೆ ಪೊಲೀಸರ ಮೌನವೂ ಹಲವು ಸಂಶಯಕ್ಕೆ ಕಾರಣವಾಗಿದೆ. ನಾನು ತಮ್ಮಲ್ಲಿ ವಿನಂತಿಸುವುದೇನೆಂದರೆ ನನಗೆ ಹಾಗೂ ಅಜ್ಜಿಯವರಿಗೆ ಮಾವ, ಅತ್ತೆ ಹಾಗೂ ಅವರ ಮಗ ತೊಂದರೆ ನೀಡುವ ಸಾಧ್ಯತೆ ಇರುವುದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಮೊಮ್ಮಗಳಿಗೂ ಆಸ್ತಿ; ಮಾವನಿಗೆ ರೋಷ: ಅಜ್ಜಿ ಮರಿಯಮ್ಮರೊಂದಿಗೆ 16 ವರ್ಷಗಳಿಂದ ಮೊಮ್ಮಗಳು ಸ್ನೋವಿ ಎಂ. ಥಾಮಸ್ ವಾಸಿಸುತ್ತಿದ್ದು, ಕಡಬ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ನೋವಿ ಒಂದು ವರ್ಷದ ಮಗು ಇರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ಅಜ್ಜಿಯೇ ಪಾಲನೆ- ಪೋಷಣೆ ಮಾಡುತ್ತಾ ಬಂದಿದ್ದಾರೆ. ಸ್ನೋವಿ ತಂದೆ ಬೇರೆ ಮದುವೆಯಾಗಿ ಪ್ರತ್ಯೇಕ ವಾಸವಿದ್ದಾರೆ. ಆದ್ದರಿಂದ ಅಜ್ಜಿ ಮೊಮ್ಮಗಳಿಗೂ ಆಸ್ತಿ ಪಾಲು ಇಟ್ಟಿದ್ದರು. ಇದು ಮಾವ ಜಾನ್ಸನ್ ಕಿರುಕುಳಕ್ಕೆ ಕಾರಣ.
Kshetra Samachara
07/01/2022 11:00 am