ಹೆಬ್ರಿ :ಸುಲಿಗೆ ಸಹಿತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭೂಗತ ಪಾತಕಿ, ಹೆಬ್ರಿ ಮೂಲದ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಮೊನ್ನೆ ತಡರಾತ್ರಿ ಆತನನ್ನು ದೆಹಲಿಗೆ ಕರೆತರಲಾಗಿದೆ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಬೇಹುಗಾರಿಕೆ ದಳ ಮತ್ತು ಸಿಬಿಐ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ನಡೆಸಿದ ನಂತರ ಈತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಅಪರಾಧ ವಿಭಾಗದ ತಂಡವೊಂದು ಈಗಾಗಲೇ ದೆಹಲಿಗೆ ತೆರಳಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮುಂಬೈ ಹಾಗೂ ಥಾಣೆ ಪೊಲೀಸರು ಕ್ರಮವಾಗಿ 2017, 2018ರಲ್ಲಿ ಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಅಕ್ಟೋಬರ್‌ನಲ್ಲಿ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿತ್ತು.
Kshetra Samachara
16/12/2021 09:14 pm