ಮಂಗಳೂರು: ಪಾರ್ಟ್ ಟೈಮ್ ಕೆಲಸಕ್ಕೆ ಆಯ್ಕೆಯಾಗಿರುವಿರೆಂದು ಸಂದೇಶ ಕಳುಹಿಸಿ ಬಳಿಕ ಮಂಗಳೂರಿನ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 5,31,200 ರೂ. ವಂಚಿಸಿರುವ ಘಟನೆ ನಡೆದಿದೆ.
ನ.26ರಂದು ಮಂಗಳೂರಿನ ವ್ಯಕ್ತಿಯೋರ್ವರ ಮೊಬೈಲ್ಗೆ 'ತಾವು ಪಾರ್ಟ್ ಟೈಮ್ ಜಾಬ್ಗೆ ಆಯ್ಕೆಯಾಗಿದ್ದೀರಿ' ಎಂಬ ಸಂದೇಶವೊಂದು ಬಂದಿತ್ತು. ಆ ವ್ಯಕ್ತಿ ಸಂದೇಶ ಬಂದಿರುವ ಮೊಬೈಲ್ ಸಂಖ್ಯೆಗೆ ಮರು ಸಂದೇಶ ಕಳುಹಿಸಿದ್ದಾರೆ. ಆಗ ವಂಚಕರು ಅವರಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಲಿಂಕ್ ಒಂದನ್ನು ಕಳುಹಿಸಿದ್ದಾರೆ.
ಆ ವ್ಯಕ್ತಿಯು ವಂಚಕರು ಹೇಳಿದಂತೆ ಲಿಂಕ್ ಕ್ಲಿಕ್ ಮಾಡಿ ವೆಬ್ಸೈಟ್ ಓಪನ್ ಮಾಡಿದ್ದಾರೆ. ಬಳಿಕ ಅದಕ್ಕೆ ಡಿ.5ರಂದು 200 ರೂ. ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭಾಂಶ ಎಂದು ಡಿ. 6ರಂದು 380 ರೂ. ಕಳುಹಿಸಿದ್ದಾರೆ. ಇದನ್ನು ನಂಬಿದ ವ್ಯಕ್ತಿ ತಮ್ಮ ಖಾತೆಯಿಂದ ಅಪರಿಚಿತರು ಕಳುಹಿಸಿರುವ ಕ್ಯೂ ಆರ್ ಕೋಡ್ಗೆ ಹಂತ ಹಂತವಾಗಿ 5,31,200 ರೂ. ಹೂಡಿಕೆ ಮಾಡಿದ್ದಾರೆ.
ಆದರೆ, ಆ ಬಳಿಕ ಅವರು ಹಾಕಿರುವ ಹಣಕ್ಕೆ ಯಾವುದೇ ಲಾಭಾಂಶ ಬಂದಿರಲಿಲ್ಲ. ಇದರಿಂದ ಅವರಿಗೆ ತಾವು ವಂಚನೆಗೊಂಡಿರೋದು ಖಚಿತವಾಗಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.
Kshetra Samachara
10/12/2021 10:43 pm