ಮಂಗಳೂರು: ಮನೆ ಹೊರಭಾಗದಲ್ಲಿ ಕಟ್ಟಿ ಹಾಕಿದ್ದ ಮೂರು ದನಗಳನ್ನು ಖದೀಮರು ಅಪಹರಿಸಿದ ಘಟನೆ ನಗರದ ಕೂಳೂರಿನ ಗೋಲ್ಡ್ ಪಿಂಚ್ ಬಳಿ ನಡೆದಿದೆ.
ಕೂಳೂರಿನ ಮಲರಾಯ ದೈವಸ್ಥಾನದ ಬಳಿಯ ಉಮೇಶ್ ಎಂಬವರ ಮನೆ ಹೊರಗಡೆ ಅನತಿ ದೂರದಲ್ಲಿ ದನಗಳನ್ನು ಕಟ್ಟಿದ್ದರು. ಇಂದು ಮುಂಜಾವ ನಾಲ್ಕರ ಸುಮಾರಿಗೆ ಕಪ್ಪು ಸ್ಕಾರ್ಪಿಯೋದಲ್ಲಿ ಬಂದ ನಾಲ್ವರು ಕಳ್ಳರು, ಗೋವುಗಳನ್ನು ಬಲವಂತವಾಗಿ ವಾಹನದೊಳಗೆ ತುಂಬಿಸಿದ್ದಾರೆ.
ಈ ಸಂದರ್ಭ ಸ್ಥಳೀಯರು ಇದನ್ನು ನೋಡಿ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಮನೆಮಂದಿ ಸ್ಥಳಕ್ಕೆ ಧಾವಿಸಿ, ಬೊಬ್ಬೆ ಹಾಕಿದ್ದಾರೆ. ಆಗ ಗೋಕಳ್ಳರಲ್ಲಿ ಓರ್ವ ತಲವಾರು ತೋರಿಸಿದ್ದಾನೆ. ಅಲ್ಲದೆ, ವಾಹನಕ್ಕೆ ತುಂಬಿಸುತ್ತಿದ್ದ ಗೋವು ಬಿಟ್ಟು ಮೂರು ದನಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಬಗ್ಗೆ ತಕ್ಷಣ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಕಾವೂರು ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಬಜರಂಗದಳ ಸಂಘಟನೆಯ ಕಾರ್ಯಕರ್ತರೂ ಧಾವಿಸಿ, ಕೃತ್ಯ ಎಸಗಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ, ಅಪಹರಿಸಿದ ಗೋವು ಪತ್ತೆಹಚ್ಚಬೇಕು. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮಂಗಳೂರಿನ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಡಿ.4ರಂದು ಕಾವೂರು ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
Kshetra Samachara
03/12/2021 06:19 pm