ಮಂಗಳೂರು: ಅಪ್ರಾಪ್ತ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಯುವಕನ ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಒಂದನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ 7 ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಅಪ್ರಾಪ್ತೆಯ ಅಪಹರಣ ಮಾಡಿದ್ದಕ್ಕೆ 3 ವರ್ಷ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 15 ದಿನಗಳ ಕಠಿಣ ಶಿಕ್ಷೆ, ಅತ್ಯಾಚಾರ ಮಾಡಿರೋದಕ್ಕೆ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 2 ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕು. ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ?:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಎಂಬ ಆರೋಪಿ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ 17 ವರ್ಷದ ದಲಿತ ಬಾಲಕಿಯನ್ನು ಅಪಹರಣ ಮಾಡಿದ್ದ. ಬಳಿಕ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಸ್ಲೀಪರ್ ಬಸ್‌ನಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸುತ್ತಾಡಿ ಅಲ್ಲಿಯೂ ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ಪೋಷಕರು ಆರೋಪಿಸಿದ್ದರು.
ಆರೋಪಿ ನಿತಿನ್, ಖಾಸಗಿ ಬಸ್ ನಿರ್ವಾಹಕನಾಗಿದ್ದು, ಈತನಿದ್ದ ಬಸ್‌ನಲ್ಲಿಯೇ ಬಾಲಕಿ ಕಾಲೇಜಿಗೆ ಹೋಗಿ ಬರುತ್ತಿದ್ದಳು. 2014ರ ಜುಲೈ 24ರಂದು ಪುತ್ತೂರಿಗೆ ಬರುವಂತೆ ಹೇಳಿ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿ ಈ ಕೃತ್ಯ ಎಸಗಿದ್ದ. ಈ ನಡುವೆ ಬಾಲಕಿ ನಾಪತ್ತೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಾಲಕಿ ಹಾಗೂ ನಿತಿನ್‌ನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದರು. ಈ ವೇಳೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.
Kshetra Samachara
28/11/2021 11:21 am