ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಗುರುವಾರ ಸಂಜೆ ಪರಾರಿಯಾಗಿದ್ದ ಕಳ್ಳತನದ ಆರೋಪಿಯನ್ನು ಮುಲ್ಕಿ ಪೊಲೀಸರು, ಆಟೋ ಚಾಲಕರ ಸಹಕಾರದೊಂದಿಗೆ ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಮುಲ್ಕಿ ಪೊಲೀಸರು ಕಳ್ಳತನ ಆರೋಪದ ಮೇಲೆ ವಿಚಾರಣೆ ನಡೆಸಲು ಮಲ್ಪೆ ಕಲ್ಮಾಡಿಯ ಕಿರಣ್ ಮತ್ತು ಸಂದೀಪ್ ಎಂಬವರನ್ನು ಬಂಧಿಸಿದ್ದರು.
ಆದರೆ, ವಿಚಾರಣೆ ವೇಳೆ ಗುರುವಾರ ಸಂಜೆ ಕಿರಣ್ ಠಾಣೆಯಿಂದ ಪರಾರಿಯಾಗಿದ್ದ!
ಈತ ರಾತ್ರಿ ಪಂಚಮಹಲ್ ದೇವಸ್ಥಾನದ ಸಮೀಪದ ತೋಟದಲ್ಲಿ ಅವಿತಿದ್ದು, ಇಂದು ಮುಂಜಾವ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿಗೆ ಬಂದಿದ್ದಾನೆ. ಅಲ್ಲಿ ಆಟೋ ನಿಲ್ಲಿಸಿ, ಚಾಲಕ ದಿನೇಶ್ ದೇವಾಡಿಗ ಬಳಿ ಮೂಡುಬಿದಿರೆಗೆ ಹೋಗಲು ಹೇಳಿದ್ದಾನೆ.
ಆಟೋ ಎಸ್ ಕೋಡಿ ಸಮೀಪಿಸುತ್ತಿದ್ದಂತೆಯೇ ಕಿರಣ್, "ತನಗೆ ಹೊಸಬಟ್ಟೆ ಬೇಕು. ನನ್ನ ಬಟ್ಟೆ ಹರಿದಿದೆ. ಪಕ್ಷಿಕೆರೆಗೆ ಹೋಗಿ ಹೊಸಬಟ್ಟೆ ತೆಗೆದುಕೊಳ್ಳೋಣ" ಎಂದಿದ್ದಾನೆ.
ಈ ಸಂದರ್ಭ ಆಟೋ ಚಾಲಕನಿಗೆ ಸಂಶಯ ಬಂದು ಈತನೇ ಠಾಣೆಯಿಂದ ಪರಾರಿಯಾದ ಆರೋಪಿ ಎಂದು ಅರಿತು, ಕೂಡಲೇ ಆಟೋ ತಿರುಗಿಸಿ ಕಿಲ್ಪಾಡಿ ಗೇರುಕಟ್ಟೆ ಬಳಿ ನಿಲ್ಲಿಸಿದಾಗ ಕಿರಣ್ ಆಟೋದಿಂದ ಜಿಗಿದು ಪರಾರಿಯಾಗಿದ್ದಾನೆ.
ಕೂಡಲೇ ಚಾಲಕ ದಿನೇಶ್ ದೇವಾಡಿಗ ನೀಡಿದ ಮಾಹಿತಿಯಂತೆ ಎಸಿಪಿ ಮಹೇಶ್ ಕುಮಾರ್ ಹಾಗೂ ಮುಲ್ಕಿ ಇನ್ಸ್ ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿ ಕಿಲ್ಪಾಡಿ ಪಂಚಾಯತ್ ಹಿಂಬದಿಯ ಬೆಥನಿ ಶಾಲೆ ಬಳಿಯ ಕಾಡಿನಲ್ಲಿ ಅವಿತಿದ್ದ ಕಿರಣ್ ನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಲ್ಕಿ ಠಾಣಾ ಎಎಸ್ಸೈ ಚಂದ್ರಶೇಖರ್, ಕೃಷ್ಣಪ್ಪ ಹಾಗೂ ಮುಲ್ಕಿ ಆಟೋಚಾಲಕರು ಭಾಗವಹಿಸಿದ್ದರು.
ಕಿರಣ್ ಕಲ್ಮಾಡಿಯಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಸಣ್ಣಪುಟ್ಟ ಕಳ್ಳತನದ ಆರೋಪ ಎದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
26/11/2021 01:44 pm