ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಇಂದು ಸಂಜೆ ಕಳ್ಳತನದ ಆರೋಪಿಯೊಬ್ಬ ಪರಾರಿಯಾದ ಘಟನೆ ನಡೆದಿದೆ!
ಇಂದು ಇಳಿಸಂಜೆ 7 ಗಂಟೆ ಸುಮಾರಿಗೆ ಹಳೆ ಪೊಲೀಸ್ ಠಾಣೆಯ ಒಳಗಡೆ ಬಂಧಿಸಿ, ಸೆಲ್ ನಲ್ಲಿದ್ದ ಆರೋಪಿ ಏಕಾಏಕಿ ಠಾಣೆಯಿಂದ ಹೊರಬಂದು ಸಿನಿಮೀಯ ಮಾದರಿಯಲ್ಲಿ ಎಸ್ಕೇಪ್ ಆಗಿದ್ದಾನೆ.
ಈ ಸಂದರ್ಭ ಸ್ಥಳೀಯರು ಕಳ್ಳ, ಕಳ್ಳ ಎಂದು ಬೊಬ್ಬೆ ಹಾಕಿದ್ದಾರೆ. ಪರಾರಿಯಾದ ಆರೋಪಿ ಹಳೆ ಪೊಲೀಸ್ ಠಾಣೆಯ ರಸ್ತೆ ಎದುರಿನಲ್ಲಿ ಓಡಿ ಬಂದು ಪಂಚಮಹಲ್ ದೇವಸ್ಥಾನದ ಬಳಿಯ ತೋಡಿಗೆ ಹಾರಿ ಗಾಯಗೊಂಡಿದ್ದಾನೆ. ಬಳಿಕ ಹಿಂಬದಿಯ ತೋಟದೊಳಗೆ ನುಗ್ಗಿ, ಕಾಣದಾಗಿದ್ದಾನೆ.
ಆರೋಪಿ ಪರಾರಿ ಸಂದರ್ಭ ಮುಲ್ಕಿ ವ್ಯಾಪ್ತಿಯಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಆರೋಪಿಗೆ ವರದಾನವಾಯಿತು.
ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಪತ್ತೆ ಹಚ್ಚಲು ಟಾರ್ಚ್ ಹಾಕಿ ಹುಡುಕಾಟ ನಡೆಸಿದ್ದರೂ ಫಲಕಾರಿಯಾಗಿಲ್ಲ.
ಆರೋಪಿ ಉಡುಪಿ ನಿವಾಸಿಯಾಗಿದ್ದು, ಸುಮಾರು 36ರಿಂದ 40 ವರ್ಷದವನಾಗಿದ್ದಾನೆ. ಕಪ್ಪು ಪ್ಯಾಂಟ್, ಕಪ್ಪು ಶರ್ಟ್ ಧರಿಸಿದ್ದ ಎನ್ನಲಾಗಿದೆ. ಐದು ದಿನಗಳ ಹಿಂದೆ ಪೊಲೀಸರು ಬಂಧಿಸಿ ಹಳೆ ಪೊಲೀಸ್ ಠಾಣೆಯ ಸೆಲ್ ನಲ್ಲಿ ಇರಿಸಿದ್ದರು.
ಆದರೆ, ಕೈಗೆ ಕೋಳ ಹಾಕದೆ ಸೆಲ್ ಗೆ ಬೀಗ ಹಾಕದೇ ಇರುವುದರಿಂದ ತಪ್ಪಿಸಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಹಳೆ ಪೊಲೀಸ್ ಠಾಣೆಯ ಪಕ್ಕದಲ್ಲಿ ನೂತನ ಪೊಲೀಸ್ ಠಾಣೆ ಇದ್ದು ಕಳ್ಳನನ್ನು ಹಳೆ ಪೊಲೀಸ್ ಠಾಣೆ ಸೆಲ್ ನಲ್ಲಿ ಯಾಕೆ ಇರಿಸಿದ್ದರು? ಎಂಬ ಸಂಶಯವೂ ವ್ಯಕ್ತವಾಗಿದೆ.
ಕೆಲ ತಿಂಗಳಿನಿಂದ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ. ಈ ನಡುವೆ ಪೊಲೀಸ್ ಠಾಣೆಯಿಂದ ಕಳ್ಳ ತಪ್ಪಿಸಿಕೊಂಡಿರುವ ಬಗ್ಗೆ ಠಾಣೆಯ ಸಮೀಪ ಕಳ್ಳತನ ನಡೆದಿರುವ ಮನೆಯವರ ಸಹಿತ ನಾಗರಿಕರು ಆತಂಕಗೊಂಡಿದ್ದು, ಜತೆಗೆ ಪೊಲೀಸರ ನಿರ್ಲಕ್ಷ್ಯ ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
25/11/2021 10:33 pm