ಮಂಗಳೂರು: ಮನಪಾ ಅಧಿಕಾರಿಗಳ ಸೋಗಿನಲ್ಲಿ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ಖದೀಮರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ನಗರದ ಉರ್ವಸ್ಟೋರ್ ಸಮೀಪದ ದಡ್ಡಲ್‍ಕಾಡ್ ಎಂಬಲ್ಲಿ ನಡೆದಿದೆ.
ನ.17ರಂದು ಬೆಳಗ್ಗೆ 10:30ರ ಸುಮಾರಿಗೆ ಇಬ್ಬರು ಆಗಂತುಕರು ಬಂದಿದ್ದಾರೆ. ಮಹಿಳೆಯ ಬಳಿ ತಮ್ಮನ್ನು ಮನಪಾ ಆರೋಗ್ಯ ವಿಭಾಗದ ಅಧಿಕಾರಿಗಳೆಂದು ಪರಿಚಯಿಸಿದ್ದಾರೆ. ಸ್ವಚ್ಛತಾ ಪರಿಶೀಲನೆ ನಡೆಸಲಿದ್ದೇವೆ ಎಂದು ಆಕೆಯನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದು ಪರಿಶೀಲನೆ ನಡೆಸುವ ನಾಟಕವಾಡಿದ್ದಾರೆ. ಈ ಸಂದರ್ಭ ಮಹಿಳೆ ನೆರೆಮನೆಯವರನ್ನು ಕರೆದಿದ್ದಾರೆ. ಈ ಬಗ್ಗೆ ಸಂಶಯಗೊಂಡ ನೆರೆಮನೆಯವರು ಅವರಲ್ಲಿ 'ಗುರುತಿನ ಚೀಟಿ' ಕೇಳಿದ್ದಾರೆ. ಆಗ ಕಳ್ಳರಿಬ್ಬರು ಬೈಕ್‍ನಲ್ಲಿದೆ, ತರುತ್ತೇವೆ ಎಂದು ಹೇಳಿ ಪರಾರಿಯಾಗಿದ್ದಾರೆ.
ಆದರೆ, ಸಂಜೆ ವೇಳೆಗೆ ಮಹಿಳೆ ಕಪಾಟು ಪರಿಶೀಲಿಸಿದಾಗ 68 ಗ್ರಾಂ ಚಿನ್ನಾಭರಣ ಹಾಗೂ 71 ಸಾವಿರ ರೂ. ಕಳವಾಗಿರುವುದು ಗೊತ್ತಾಗಿದೆ. ಮಹಿಳೆಯನ್ನು ಮನೆ ಹಿಂಭಾಗಕ್ಕೆ ಕರೆದೊಯ್ದು ಮಾತನಾಡುತ್ತಿದ್ದಾಗ ಮತ್ತೋರ್ವ ಮನೆ ಪ್ರವೇಶಿಸಿ ಕಳ್ಳತನ ನಡೆಸಿದ್ದಾನೆ. ಕಪಾಟು ಕೀ ಅಲ್ಲೇ ಮುಂಭಾಗ ನೇತು ಹಾಕಿರೋದು ಕಳವಿಗೆ ಸುಲಭವಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/11/2021 09:43 am